ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಸಿಎಂ ಸಾಧ್ಯತೆ, ಡಿಸಿಎಂ ಸ್ಥಾನಕ್ಕೆ ಏಕನಾಥ್ ಶಿಂಧೆ, ಅಜಿತ್ ಪವಾರ್; ಇಲ್ಲಿದೆ ವಿವರ

Maharashtra CM: ಮಹಾರಾಷ್ಟ್ರ ಚುನಾವಣೆ ಫಲಿತಾಂಶ ಬಂದು ಮೂರು ದಿನಗಳಾದರೂ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಇನ್ನೂ ನಿರ್ಧರಿಸುವುದು ಸಾಧ್ಯವಾಗಿಲ್ಲ. ಮಹಾಯುತಿಯ ಮೂರು ಪಕ್ಷಗಳ ಅಂದರೆ ಬಿಜೆಪಿ (132 ಸ್ಥಾನ), ಶಿವಸೇನಾ ( 57), ಎನ್‌ಸಿಪಿ (41) ನಾಯಕರು ಕುಳಿತು ಮಾತುಕತೆ ನಡೆಸಿ ಒಮ್ಮತಕ್ಕೆ ಬಂದರಾ? ಮಹಾರಾಷ್ಟ್ರ ಸಿಎಂ ಯಾರು? ಎಂಬ ಕುತೂಹಲ ಹೆಚ್ಚಾಗುತ್ತಲೇ ಇದೆ. ಈ ನಡುವೆ, ಏಕನಾಥ ಶಿಂಧೆ ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿ, ಇಲ್ಲಿ ಅವರ ಪುತ್ರನನ್ನು ಉಪ ಮುಖ್ಯಮಂತ್ರಿ ಮಾಡ್ತಾರೆ ಎಂಬ ವದಂತಿ ಹರಡಿತ್ತು. ಆದರೆ, ಇತ್ತೀಚಿನ ಅಪ್ಡೇಟ್ಸ್ ಪ್ರಕಾರ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಲಿದ್ದಾರೆ. ಇಲ್ಲಿಯವರೆಗೆ ಮುಖ್ಯಮಂತ್ರಿಯಾಗಿದ್ದ ಏಕನಾಥ್ ಶಿಂಧೆ ಉಪ ಮುಖ್ಯಮಂತ್ರಿ ಆಗಲಿದ್ದು, ಮೊದಲಿನಂತೆ ಅಜಿತ್ ಪವಾರ್ ಕೂಡ ಉಪ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಸೋಮವಾರ ಬಿಜೆಪಿ ಹೈಕಮಾಂಡ್ ಫಡ್ನವೀಸ್ ಹೆಸರನ್ನು ಅನುಮೋದಿಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಇದಕ್ಕೆ ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ ಕೂಡ ಒಪ್ಪಿಗೆ ಸೂಚಿಸಿವೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ. ಫಡ್ನವೀಸ್ ಅವರ ಹೆಸರನ್ನು ಉನ್ನತ ನಾಯಕತ್ವ ಅನುಮೋದಿಸಿದೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ. ಈ ಪ್ರಸ್ತಾವನೆಯನ್ನು ಎನ್‌ಸಿಪಿ ಮತ್ತು ಶಿವಸೇನೆಗೆ ಕಳುಹಿಸಲಾಗಿದೆ, ಅದಕ್ಕೆ ಅವರು ಒಪ್ಪಿದ್ದಾರೆ ಎಂದು ವರದಿ ಹೇಳಿದೆ.