ಅಧ್ಯಕ್ಷೀಯ ಚುನಾವಣೆಯ ಮತದಾನ, ಫಲಿತಾಂಶಗಳು ಭಾರತೀಯ ಕಾಲಮಾನ ಪ್ರಕಾರ ಯಾವಾಗ, ಇಲ್ಲಿದೆ 5 ಅಂಶಗಳ ವಿವರ

ನವದೆಹಲಿ/ಬೆಂಗಳೂರು: ಅಮೆರಿಕ ಚುನಾವಣೆ ಸದ್ಯ ಹೆಚ್ಚು ಟ್ರೆಂಡಿಂಗ್‌ನಲ್ಲಿರುವ ವಿಷಯ. ಅಮೆರಿಕ ಅಧ್ಯಕ್ಷೀಯ ಚುನಾವಣೆ ನವೆಂಬರ್ 5 ರಂದು ಮಂಗಳವಾರ ನಡೆಯಲಿದೆ. ಅಂದರೆ ಇಂದೇ ನಡೆಯಲಿದೆ. ವಾಸ್ತವದಲ್ಲಿ ಅಮೆರಿಕ ಚುನಾವಣೆ ಈಗಾಗಲೇ ಶುರುವಾಗಿದ್ದರೂ, ನವೆಂಬರ್ 5 ಮಂಗಳವಾರ ಅಧಿಕೃತ ಮತದಾನದ ದಿನ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ, ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ನೇರ ಸ್ಪರ್ಧೆ. ಮತದಾನಕ್ಕೆ ಅಧಿಕೃತ ದಿನ ನವೆಂಬರ್ 5 ಆದರೂ ಅಧಿಕೃತ ಫಲಿತಾಂಶ ಪ್ರಕಟವಾಗುವುದು ಕೆಲವು ದಿನಗಳ ಬಳಿಕ. ಮತ ಪತ್ರಗಳ ಎಣಿಕೆ ಇಂದು ಮತದಾನ ಮುಗಿಯುತ್ತಿದ್ದಂತೆ ಶುರುವಾಗುತ್ತದೆ. ಆರಂಭಿಕ ಎಣಿಕೆಯ ಫಲಿತಾಂಶದ ಆಧಾರದ ಮೇಲೆ ವಿಜೇತರು ಯಾರು ಎಂಬುದನ್ನು ಅಂದಾಜಿಸಲಾಗುತ್ತದೇ ಹೊರತು ಅದು ನಿಖರ ಅಥವಾ ಅಧಿಕೃತ ಫಲಿತಾಂಶವಲ್ಲ. 2020 ರಲ್ಲಿ, ಅಂದರೆ ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಕೆಲವು ರಾಜ್ಯಗಳಲ್ಲಿ ರಿಪಬ್ಲಿಕ್ ಪಾರ್ಟಿ ಆರಂಭದಲ್ಲಿ ಮುನ್ನಡೆ ಸಾಧಿಸಿದ್ದರೂ, ಅಧಿಕೃತ ಫಲಿತಾಂಶ ಬಂದಾಗ ಹಿನ್ನಡೆ ಅನುಭವಿಸಿತ್ತು. ಆ ರಾಜ್ಯಗಳಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ಗೆಲುವು ಕಂಡಿದ್ದರು ಎಂಬುದನ್ನು ನೆನಪಿಸಿಕೊಳ್ಳಬಹುದು.