ಅಮೆರಿಕ ಚುನಾವಣೆ ನಡೆಯೋದು ಯಾವಾಗ, ಮತ ಎಣಿಕೆ ಎಷ್ಟು ಗಂಟೆಗೆ, ಅಮೆರಿಕನ್ನರು ಹೇಗೆ ಅಧ್ಯಕ್ಷರನ್ನು ಆಯ್ಕೆ ಮಾಡ್ತಾರೆ- ಇಲ್ಲಿದೆ ವಿವರ

ನವದೆಹಲಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇನ್ನೆರಡು ದಿನ ಬಾಕಿ. ನವೆಂಬರ್ 5ಕ್ಕೆ ಮತದಾನ ನಡೆಯಲಿದ್ದು, ಅದಾದ ಬಳಿಕ ಫಲಿತಾಂಶ ಘೋಷಣೆಯಾಗಲಿದೆ. ಅಧ್ಯಕ್ಷೀಯ ಅಭ್ಯರ್ಥಿಗಳಾಗಿ ಡೆಮಾಕ್ರಟಿಕ್ ಪಕ್ಷದಿಂದ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ರಿಪಬ್ಲಿಕನ್ ಪಕ್ಷದಿಂದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಣದಲ್ಲಿದ್ದಾರೆ. ಈ ಸಲದ ಚುನಾವಣೆ ಪ್ರಕ್ರಿಯೆಯು ಅಧ್ಯಕ್ಷ ಜೋ ಬಿಡೆನ್ ಅವರು 2024ರ ಜೂನ್ 27ರಂದು ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ಬಳಿಕ ಕಳೆದ ಬೇಸಿಗೆಯಲ್ಲಿ ನಾಟಕೀಯ ತಿರುವು ಪಡೆದುಕೊಂಡಿತು. ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನಾಮ ನಿರ್ದೇಶಿತರಾದರು. ಅದುವರೆಗೂ ಪ್ರಚಾರದಲ್ಲಿ ಹಿನ್ನಡೆ ಅನುಭವಿಸಿದ್ದ ಡೆಮಾಕ್ರಟಿಕ್ ಪಕ್ಷ ಚೇತರಿಸಿಕೊಂಡಿತು. ರಿಪಬ್ಲಿಕನ್ ಪಾರ್ಟಿಗೆ ಪೈಪೋಟಿ ನೀಡಲಾರಂಭಿಸಿತು. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನವೆಂಬರ್ ಮೊದಲ ಮಂಗಳವಾರದಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯುತ್ತದೆ. ಸ್ಪರ್ಧಿಸುವ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕೆಲವು ತಿಂಗಳು ಮುಂಚೆಯೇ ಪ್ರಾರಂಭವಾಗುತ್ತದೆ. ಈಗ ಅಂತಿಮ ಘಟ್ಟ ತಲುಪಿದ್ದು, ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ರಿಪಬ್ಲಿಕನ್ ಪಾರ್ಟಿ ನಾಮನಿರ್ದೇಶಿತರಾಗಿ ಡೊನಾಲ್ಡ್ ಟ್ರಂಪ್ ಮತ್ತು ಅವರ ಸಹವರ್ತಿಯಾಗಿ ಜೆ ಡಿ ವ್ಯಾನ್ಸ್, ಡೆಮಾಕ್ರಟಿಕ್ ಪಾರ್ಟಿ ನಾಮ ನಿರ್ದೇಶಿತರಾಗಿ ಕಮಲಾ ಹ್ಯಾರಿಸ್ ಮತ್ತು ಗವರ್ನರ್ ಟಿಮ್ ವಾಲ್ಜ್ ಕಣದಲ್ಲಿದ್ದಾರೆ.