ಆಲ್ಕೆರೆ ಹೊಸಹಳ್ಳಿ ಗ್ರಾಮದಲ್ಲಿ 6 ದಶಕದ ಬಳಿಕ ಹೊರಬೀಡು ಆಚರಣೆ; ಅಕಾಲ ಮೃತ್ಯು ತಡೆಗೆ ದೇವರಿಗೆ ವಿಶೇಷ ಪೂಜೆ

ಅಕಾಲ ಮೃತ್ಯುವಿನಿಂದ ಕಂಗೆಟ್ಟ ಆಲ್ಕೆರೆ ಹೊಸಹಳ್ಳಿ ಜನ; ಗ್ರಾಮದೇವತೆಯನ್ನು ಒಲಿಸಲು ಹೊರಬೀಡು ಆಚರಣೆ
ಕುಣಿಗಲ್ ತಾಲೂಕು ಆಲ್ಕೆರೆಹೊಸಹಳ್ಳಿ ಗ್ರಾಮದಲ್ಲಿ 350 ಕುಟುಂಬಗಳಿವೆ. ಅಲ್ಲಿ 2024ರ ಮಾರ್ಚ್‌ನಿಂದೀಚೆಗೆ ಡಿಸೆಂಬರ್ ಕೊನೆ ತನಕ 35ಕ್ಕೂ ಹೆಚ್ಚು ಜನ ಅಕಾಲ ಮೃತ್ಯುವಿಗೆ ಬಲಿಯಾಗಿದ್ದು, ಈ ಪೈಕಿ ವಯಸ್ಸಾಗಿ ಮೃತಪಟ್ಟವರು ಕಡಿಮೆ. ಅಕಾಲ ಮೃತ್ಯುಗಳು ಹೆಚ್ಚಾಗಿ ಆಗಿರುವುದು ಗ್ರಾಮಸ್ಥರನ್ನು ಚಿಂತೆಗೆ ಈಡು ಮಾಡಿತ್ತು, ಗ್ರಾಮದ ಹಿರಿ, ಕಿರಿಯರು ಒಂದೆಡೆ ಕೂತು ಅಕಾಲ ಮೃತ್ಯು ಸೇರಿದಂತೆ ಗ್ರಾಮದಲ್ಲಿ ರೋಗ ರುಜಿನ ಬಾರದಂತೆ ಏನು ಮಾಡಬೇಕೆಂದು, ಶಾಂತಿ, ನೆಮ್ಮದಿ ನೆಲೆಸಲು ಮಾಡಬೇಕಾದ್ದು ಏನು ಎಂದು ಚರ್ಚಿಸಿದ್ದರು. ಹಿರಿಯರಾದ ನಂಜುಂಡಪ್ಪ, ನಂಜಪ್ಪ, ಗೋವಿಂದಪ್ಪ ಇತರರ ನೇತೃತ್ವದಲ್ಲಿ ಈ ಸಮಾಲೋಚನೆ ನಡೆಸಲಾಗಿ ಹಿರಿಯರು ಸುಮಾರು 60 ವರ್ಷಗಳ ಹಿಂದೆ ಪ್ಲೇಗ್ ಹಾವಳಿಯಿಂದಾಗಿ ಹೊರಬೀಡು ಆಚರಣೆ ಮಾಡಿ ಗ್ರಾಮದೇವತೆ ಮೆರವಣಿಗೆ ನಡೆಸಿದ ನಂತರ ಊರೊಳಗೆ ಬಂದು ವಾಸ ಮಾಡಿದ ನಂತರ ಪ್ಲೇಗ್ ಹಾವಳಿ ನಿಯಂತ್ರಣಗೊಂಡಿತ್ತು ಎಂಬುದನ್ನು ಸ್ಮರಿಸಿಕೊಂಡರು. ನಂತರ ಈ ಆಚರಣೆ ನಡೆದಿಲ್ಲ. ಈಗ ಸಮಸ್ಯೆಗಳು ಕಾಣಿಸಕೊಂಡಿವೆ. ಹೀಗಾಗಿ ಹೊರಬೀಡು ಆಚರಣೆ ಸೂಕ್ತ ಎಂಬ ನಿರ್ಧಾರಕ್ಕೆ ಗ್ರಾಮಸ್ಥರು ಬಂದಿದ್ದರು.