ಕೊಹ್ಲಿ, ಪಡಿಕ್ಕಲ್ ಅಬ್ಬರ; ತವರಿನ ಸೋಲಿಗೆ ಪಂಜಾಬ್ ಕಿಂಗ್ಸ್ ವಿರುದ್ಧ ಸೇಡು ತೀರಿಸಿಕೊಂಡ ಆರ್ಸಿಬಿ

ಇಂಡಿಯನ್ ಪ್ರೀಮಿಯರ್ ಲೀಗ್ 37ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಕಳೆದ ಪಂದ್ಯದ ಸೋಲಿಗೆ ಇದೀಗ ಆರ್ಸಿಬಿ ಸೇಡು ತೀರಿಸಿಕೊಂಡಿದೆ.
ಕೊಹ್ಲಿ, ಪಡಿಕ್ಕಲ್ ಅಬ್ಬರ; ತವರಿನ ಸೋಲಿಗೆ ಪಂಜಾಬ್ ಕಿಂಗ್ಸ್ ವಿರುದ್ಧ ಸೇಡು ತೀರಿಸಿಕೊಂಡ ಆರ್ಸಿಬಿ (AP)
ಸೇಡಿನ ಸಮರದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದು ಬೀಗಿದೆ. ವಿರಾಟ್ ಕೊಹ್ಲಿ (73*) ಮತ್ತು ದೇವದತ್ ಪಡಿಕ್ಕಲ್ (61) ಅವರ ಅಬ್ಬರದ ಅರ್ಧಶತಕಗಳ ಸಹಾಯದಿಂದ ಶ್ರೇಯಸ್ ಅಯ್ಯರ್ ಪಡೆಯ ವಿರುದ್ಧ ರಜತ್ ಪಡೆ 7 ವಿಕೆಟ್ಗಳ ಜಯಭೇರಿ ಬಾರಿಸಿದೆ. 2 ದಿನಗಳ ಹಿಂದಷ್ಟೇ ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ ವಿರುದ್ಧ ಜಯಿಸಿದ್ದ ಪಂಜಾಬ್ ಇದೀಗ ತನ್ನ ತವರಿನಲ್ಲಿ ಮುಗ್ಗರಿಸಿದೆ.
ಈ ಗೆಲುವಿನೊಂದಿಗೆ ಆರ್ಸಿಬಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರ-4ರೊಳಗೆ ಪ್ರವೇಶಿಸಿದೆ. ಕಳೆದ ಪಂದ್ಯದಲ್ಲಿ ಸೋತಿದ್ದ ಹಿನ್ನೆಲೆ 5ನೇ ಸ್ಥಾನಕ್ಕೆ ಕುಸಿದಿತ್ತು. ಇದೀಗ 3ನೇ ಸ್ಥಾನಕ್ಕೆ ಏರಿದೆ. 10 ಅಂಕಗಳೊಂದಿಗೆ ಪ್ಲೇಆಫ್ನತ್ತ ಪ್ರಬಲ ಹೆಜ್ಜೆ ಹಾಕುತ್ತಿದೆ. ಈ ಸೋಲಿನ ಬಳಿಕ ಪಂಜಾಬ್ 3 ರಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಅಲ್ಲದೆ, ತವರಿನಲ್ಲಿ ಆಡಿರುವ 3ಕ್ಕೆ 3 ಸೋತಿರುವ ಬೆಂಗಳೂರಿನ ತವರಿನ ಹೊರಗೆ ಐದಕ್ಕೆ ಐದೂ ಗೆದ್ದು ಗಮನ ಸೆಳೆದಿದೆ.
ಚಂಡೀಗಢದ ಮುಲ್ಲನ್ಪುರದ ಮಹಾರಾಜ ಯಾದವೀಂದ್ರ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ನ 37ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆರ್ಸಿಬಿ 18.5 ಓವರ್ಗಳಲ್ಲೇ ಜಯದ ನಗೆ ಬೀರಿತು. 3 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಮೊದಲ ಇನ್ನಿಂಗ್ಸ್ನಲ್ಲಿ ಆರ್ಸಿಬಿ ಬೌಲರ್ಸ್ ಮಿಂಚಿದರೆ, ಚೇಸಿಂಗ್ನಲ್ಲಿ ಕೊಹ್ಲಿ ಮತ್ತು ಪಡಿಕ್ಕಲ್ ಅಬ್ಬರಿಸಿದರು.