ಜನಾದೇಶ ಯಾರ ಪರ, ಮಹಾಯುತಿ ಆಡಳಿತ ಚುಕ್ಕಾಣಿ ಉಳಿಸಿಕೊಳ್ಳುವುದೇ, ಮಹಾ ವಿಕಾಸ ಅಘಾಡಿಗೆ ಕೊಡುವುದೇ

Maharashtra Election Result: ಮಹಾರಾಷ್ಟ್ರ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಮಹಾರಾಷ್ಟ್ರ 4 ಎಕ್ಸಿಟ್‌ಪೋಲ್‌ಗಳು ಬಿಜೆಪಿ ನೇತೃತ್ವದ ಮಹಾಯುತಿ ಆಡಳಿತ ಮುಂದುವರಿಕೆಯನ್ನು ಸೂಚಿಸಿದ್ದು, ಎರಡು ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ ಅಘಾಡಿ ಜತೆಗೆ ಸಮಬಲದ ಸ್ಪರ್ಧೆಯನ್ನು ಸೂಚಿಸಿವೆ. ನವೆಂಬರ್ 20ರಂದು ಮಹಾರಾಷ್ಟ್ರದ 288 ಕ್ಷೇತ್ರಗಳ ಮತದಾನ ನಡೆದಿದ್ದು, ನಾಳೆಯೇ (ನವೆಂಬರ್ 23) ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟವಾಗಲಿದೆ. ಎಕ್ಸಿಟ್ ಪೋಲ್ ಫಲಿತಾಂಶದ ಬಳಿಕ ಚುನಾವಣೆಯ ನಿಖರ ಫಲಿತಾಂಶ ಪ್ರಕಟವಾಗಲಿದ್ದು, ಜನಾದೇಶ ಯಾರ ಪರ ಇರಬಹುದೆಂಬ ಕುತೂಹಲ ಕೆರಳಿದೆ. ಮಹಾಯುತಿ ಆಡಳಿತ ಚುಕ್ಕಾಣಿ ಉಳಿಸಿಕೊಳ್ಳುವುದೇ, ಮಹಾ ವಿಕಾಸ ಅಘಾಡಿಗೆ ಕೊಡುವುದೇ ಎಂಬ ಕುತೂಹಲ ಹೆಚ್ಚಾಗಿದೆ. ಬಿಜೆಪಿ ನೇತೃತ್ವದ ಮಹಾ ಯುತಿಯಲ್ಲಿ ಬಿಜೆಪಿ ಹೊರತಾಗಿ ಶಿವ ಸೇನಾ (ಏಕನಾಥ ಶಿಂಧೆ), ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಅಜಿತ್ ಪವಾರ್) ಪ್ರಮುಖ ಪಕ್ಷಗಳು. ಇದಲ್ಲದೆ ಇನ್ನು ಕೆಲವು ಸಣ್ಣ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಗಳೂ ಇದ್ದಾರೆ. ಇನ್ನು ವಿಪಕ್ಷ ಸ್ಥಾನದಲ್ಲಿರುವ ಮಹಾ ವಿಕಾಸ್ ಅಘಾಡಿಯಲ್ಲಿ ಕಾಂಗ್ರಸ್ ಹೊರತಾಗಿ, ಶಿವ ಸೇನಾ (ಯುಬಿಟಿ), ಎನ್‌ಸಿಪಿ (ಶರದ್ ಪವಾರ್) ಗಳಿವೆ.