ಮಹಾರಾಷ್ಟ್ರ ಮುಖ್ಯಮಂತ್ರಿ ಯಾರು; ಎನ್ಸಿಪಿ ನಾಯಕ ಅಜಿತ್ ಪವಾರ್ ಹೇಳಿಕೆ ಬೆನ್ನಿಗೆ ಹೆಚ್ಚಾಗಿದೆ ಕುತೂಹಲ

ಮುಂಬಯಿ: ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಬಂದು ಎರಡು ದಿನ ಆಯಿತು. ಮಹಾರಾಷ್ಟ್ರ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಮಹಾಯುತಿಯ ನೇತೃತ್ವ ವಹಿಸಿರುವ ಬಿಜೆಪಿ 132 ಸ್ಥಾನ, ಶಿವಸೇನಾ 57, ಎನ್ಸಿಪಿ 41 ಸ್ಥಾನಗಳನ್ನು ಗೆದ್ದುಕೊಂಡಿದ್ದು, ವಿಧಾನಸಭೆಯ 288 ಸ್ಥಾನಗಳ ಪೈಕಿ 230 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿವೆ. ಕಳೆದ ಅವಧಿಯಲ್ಲಿ ಇದೇ ಮೈತ್ರಿ ಸರ್ಕಾರ ಇತ್ತು. ಶಿವಸೇನಾ ನಾಯಕ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿದ್ದರು. ಬಿಜೆಪಿಯ ದೇವೇಂದ್ರ ಫಡ್ನವೀಸ್ ಮತ್ತು ಎನ್ಸಿಪಿಯ ಅಜಿತ್ ಪವಾರ್ ಉಪ ಮುಖ್ಯಮಂತ್ರಿಗಳಾಗಿದ್ದರು. ಅದಕ್ಕೂ ಮೊದಲು 2014 ರಿಂದ 2019ರ ಅವಧಿಯಲ್ಲಿ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿದ್ದರು. ಅಂದು ಬಿಜೆಪಿಗೆ 122 ಸ್ಥಾನಗಳಿದ್ದವು. ಈಗ 2024ರಲ್ಲಿ ಬಿಜೆಪಿಗೆ 132 ಸ್ಥಾನ ಬಂದಿದ್ದು, ದೇವೇಂದ್ರ ಫಡ್ನವಿಸ್ ಹೆಸರು ಮುಂಚೂಣಿಯಲ್ಲಿದ್ದರೂ ಮಹಾಯುತಿಯ ಮೂರು ಪಕ್ಷಗಳ ನಾಯಕರು ಒಂದೇ ಮಾತಿಗೆ ಬದ್ಧರಾಗಿ ಹೇಳಿಕೆ ನೀಡಿರುವುದು ವಿಶೇಷ. ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿರುವಂತೆಯೇ ದೇವೇಂದ್ರ ಫಡ್ನವಿಸ್ ಮತ್ತು ಏಕನಾಥ ಶಿಂಧೆ ಹೇಳಿಕೆ ನೀಡಿದ್ದರು. ಎರಡು ದಿನಗಳ ಬಳಿಕ ಅಜಿತ್ ಪವಾರ್, ಮಹಾರಾಷ್ಟ್ರ ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಇದು ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.