ಪರಭಾಷೆ ಚಿತ್ರಗಳಲ್ಲಿ ನಟಿಸುವ ವಿಚಾರವಾಗಿ ಯೂ ಟರ್ನ್ ತೆಗೆದುಕೊಂಡ ರಿಷಭ್ ಶೆಟ್ಟಿ; ಹಿಂದೆ ಹೇಳಿದ್ದೇನು, ಈಗ ಮಾಡಿದ್ದೇನು?

ಕನ್ನಡದ ಖ್ಯಾತ ನಟ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ, ‘ದಿ ಪ್ರೈಡ್ ಆಫ್ ಭಾರತ್ – ಛತ್ರಪತಿ ಶಿವಾಜಿ ಮಹಾರಾಜ್’ ಎಂಬ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ರಿಷಭ್, ಮಂಗಳವಾರ ಬೆಳಿಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ. ರಿಷಭ್ ಶೆಟ್ಟಿ ಇದಕ್ಕೂ ಮೊದಲು ‘ಜೈ ಹನುಮಾನ್’ ಎಂಬ ಪ್ಯಾನ್ ಇಂಡಿಯಾ ಚಿತ್ರದಲ್ಲೂ ನಟಿಸುವುದಕ್ಕೆ ಒಪ್ಪಿದ್ದಾರೆ. ‘ಹನುಮ್ಯಾನ್’ ಚಿತ್ರದ ಮುಂದುವರೆದ ಭಾಗವಾದ ‘ಜೈ ಹನುಮಾನ್’ ಚಿತ್ರದಲ್ಲಿ ರಿಷಭ್, ಆಂಜನೇಯನ ಪಾತ್ರವನ್ನು ನಿರ್ವಹಿಸುತ್ತಿದ್ದು, ಮುಂದಿನ ವರ್ಷ ಚಿತ್ರೀಕರಣ ಪ್ರಾರಂಭವಾಗಲಿದೆ. ಒಂದು ಕಡೆ ಕನ್ನಡಿಗರೊಬ್ಬರು ಪರಭಾಷೆಯ ಚಿತ್ರಗಳಲ್ಲಿ ಹೆಚ್ಚುಹೆಚ್ಚು ನಟಿಸುತ್ತಿರುವುದು ಖುಷಿಯ ವಿಚಾರವಾದರೂ, ಇನ್ನೊಂದು ಕಡೆ ರಿಷಭ್ ಶೆಟ್ಟಿ, ಕನ್ನಡಕ್ಕಿಂತ ಹೆಚ್ಚಾಗಿ ಪರಭಾಷೆಯ ಚಿತ್ರಗಳಲ್ಲೇ ಹೆಚ್ಚುಹೆಚ್ಚು ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ, ಕಳೆದ ವರ್ಷ ಆಡಿದ ಮಾತುಗಳಿಗೆ ಈಗ ತಾವೇ ಯೂಟರ್ನ್ ತೆಗೆದುಕೊಂಡಿದ್ದಾರೆ.