ಭಾಷಾ ಹೇರಿಕೆ ಮಾತ್ರವಲ್ಲ, ಆಹಾರ ಸಂಸ್ಕೃತಿ ಬಗ್ಗೆಯೂ ಗಮನಿಸಿ, ಬೆಂಗಳೂರು- ಕೊಯಮತ್ತೂರು ವಂದೇ ಭಾರತ್ ಮೆನುವನ್ನು ಪ್ರಶ್ನಿಸಿದ ಮಲಯಾಳಂ ಲೇಖಕ

ಹಿಂದಿ ಭಾಷಾ ಹೇರಿಕೆ ವಿಚಾರ ಚರ್ಚೆಯಲ್ಲಿರುವ ಈ ಸಂದರ್ಭದಲ್ಲೇ ಆಹಾರ ಸಂಸ್ಕೃತಿಯ ಹೇರಿಕೆ ವಿಚಾರವೂ ಚರ್ಚೆಯ ಮುನ್ನೆಲೆಗೆ ಬಂದಿದೆ. ಮಲಯಾಳಂ ಲೇಖಕ ಎಂಎಸ್ ಮಾಧವನ್, ಬೆಂಗಳೂರು- ಕೊಯಮತ್ತೂರು ವಂದೇ ಭಾರತ್ ಮೆನುವನ್ನು ಪ್ರಶ್ನಿಸಿದ್ದು, ಭಾಷಾ ಹೇರಿಕೆ ಮಾತ್ರವಲ್ಲ, ಆಹಾರ ಸಂಸ್ಕೃತಿ ಬಗ್ಗೆಯೂ ಗಮನಿಸಿ ಎಂದಿದ್ದಾರೆ.
ಭಾಷಾ ಹೇರಿಕೆ ಮಾತ್ರವಲ್ಲ, ಆಹಾರ ಸಂಸ್ಕೃತಿ ಬಗ್ಗೆಯೂ ಗಮನಿಸಿ ಎನ್ನುತ್ತ ಬೆಂಗಳೂರು- ಚೆನ್ನೈ ವಂದೇ ಭಾರತ್ ಮೆನುವನ್ನು ಮಲಯಾಳಂ ಲೇಖಕ ಎಂ ಎಸ್ ಮಾಧವನ್ ಪ್ರಶ್ನಿಸಿದ್ದಾರೆ. (X/@NSMlive)
ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆ ವಿಚಾರ ಚರ್ಚೆ ನಡೆಯುತ್ತಿರುವಾಗಲೇ, ಆಹಾರ ಸಂಸ್ಕೃತಿ ಮೇಲೆ ಉತ್ತರ ಭಾರತೀಯರ ಹೇರಿಕೆಯ ವಿಚಾರ ಮುನ್ನೆಲೆಗೆ ಬಂದಿದೆ. ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಮಲಯಾಳಂ ಲೇಖಕ ಎಂಎಸ್ ಮಾಧವನ್ ಅವರು, ದಕ್ಷಿಣ ಭಾರತದ ವಂದೇ ಭಾರತ್ ರೈಲುಗಳ ಮೆನುವಿನಲ್ಲಿರುವ ಆಹಾರಗಳನ್ನು ಗಮನಿಸುವಂತೆ ಹೇಳಿದ್ದು, ಇದು ಆಹಾರ ಸಂಸ್ಕೃತಿಯ ಹೇರಿಕೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಭಾಷಾ ಹೇರಿಕೆ ಮಾತ್ರವಲ್ಲ, ಆಹಾರ ಸಂಸ್ಕೃತಿ ಬಗ್ಗೆಯೂ ಗಮನಿಸಿ
ಎಂಎಸ್ ಮಾಧವನ್ ಅವರು, “ಅವರು ಭಾಷಾ ಹೇರಿಕೆ ಬಗ್ಗೆ ಮಾತನಾಡುತ್ತಾರೆ. ಆಹಾರ ಹೇರಿಕೆ ಬಗ್ಗೆ ಏನು ಹೇಳುವುದು, ದಕ್ಷಿಣ ಭಾರತದ ವಂದೇ ಭಾರತ್ ರೈಲುಗಳಲ್ಲಿ ಪೂರೈಸುವ ಆಹಾರಗಳನ್ನೊಮ್ಮೆ ನೋಡಿ. ಇದು ಬೆಂಗಳೂರು- ಕೊಯಮತ್ತೂರು ವಂದೇ ಭಾರತ್ ರೈಲಿನಲ್ಲಿ ಒದಗಿಸಿದ ಆಹಾರ” ಎಂದು ವಂದೇ ಭಾರತ್ ಮೆನುವಿನ ಕಡೆಗೆ ಗಮನಸೆಳೆದಿದ್ದಾರೆ. ಪ್ರಾದೇಶಿಕ ಆಹಾರ ಸಂಸ್ಕೃತಿಯನ್ನು ಗಮನಿಸದೇ ವಂದೇ ಭಾರತ್ ರೈಲುಗಳಲ್ಲಿ ಪ್ರಯಾಣಿಕರಿಗೆ ಆಹಾರ ಒದಗಿಸುವ ಐಆರ್‌ಸಿಟಿಸಿ, ಭಾರತೀಯ ರೈಲ್ವೆಯ ಸಂವೇದನಾ ರಹಿತ ನಡೆಯನ್ನು ಪ್ರಶ್ನಿಸಿದ್ದಾರೆ.
ಎಂಎಸ್ ಮಾಧವನ್ ಅವರ ಟ್ವೀಟ್ ಬಹುಬೇಗ ಎಲ್ಲರ ಗಮನಸೆಳೆದಿದ್ದು, ಸಾಂಸ್ಕೃತಿಕ ವೈವಿಧ್ಯದ ಬಗ್ಗೆ ಚರ್ಚೆಯ ಕಾವು ಹೆಚ್ಚಿಸಿತು. ಕೆಲವು ಬಳಕೆದಾರರು ಎಂಎಸ್ ಮಾಧವನ್ ಅವರ ಕಾಳಜಿಯನ್ನು ಅರ್ಥಮಾಡಿಕೊಂಡು ಚರ್ಚೆಯನ್ನು ಮುಂದುವರಿಸಿದರೆ, ಇನ್ನು ಕೆಲವರು ಹಾಗೇ ಪ್ರತಿಕ್ರಿಯಿಸಿದ್ದಾರೆ. ಭಾಷಾ ಹೇರಿಕೆ ಮಾತ್ರವಲ್ಲ, ಆಹಾರದ ಆಯ್ಕೆಯಲ್ಲೂ ಹೇರಿಕೆ ಗೋಚರಿಸುತ್ತಿರುವುದು ಕಷ್ಟ ಎಂದು ಹೇಳಿಕೊಂಡಿದ್ದಾರೆ.
ಎಂಎಸ್ ಮಾಧವನ್ ಅವರ ಟ್ವೀಟ್ ಇಲ್ಲಿದೆ ನೋಡಿ
ಒಬ್ಬ ಬಳಕೆದಾರ, ಹೌದು, ಇದು ನಿಜಕ್ಕೂ ಆಸಕ್ತಿದಾಯಕವಾಗಿದೆ, ಕೇಂದ್ರ ಸರ್ಕಾರ ಅಥವಾ ರೈಲ್ವೆ ಎಂದಿಗೂ ಈ ಸೂಕ್ಷ್ಮ ವಿಚಾರದ ಕಡೆಗೆ ಗಮನ ಹರಿಸಿಲ್ಲ. ಅದೇನೇ ಇರಲಿ, ಉತ್ತರ ಭಾರತೀಯ ಅಥವಾ ದಕ್ಷಿಣ ಭಾರತೀಯ ಆಹಾರವಾದರೂ ಈ ಅಡುಗೆಯವರಿಗೆ ಆಹಾರವನ್ನು ಹೇಗೆ ಬೇಯಿಸುವುದು ಎಂಬುದೇ ತಿಳಿದಿಲ್ಲ -ನೀವು ಕೆಟ್ಟ ಆಹಾರವನ್ನು ರುಚಿ ನೋಡದಿದ್ದರೆ, ಹೋಗಿ ರೈಲ್ವೆಯಲ್ಲಿ ಆಹಾರ ಸೇವಿಸಿದರೆ ಆ ಅನುಭವ ನಿಮ್ಮದಾಗಿಸಬಹುದು ಎಂದು ಹೇಳಿದ್ದಾರೆ.
ಮತ್ತೊಬ್ಬರು, ಕಾಶ್ಮೀರದಿಂದ ಕನ್ಯಾಕುಮಾರಿ ತನಕ ನಮಗೆ ಇಡ್ಲಿ ಸಿಗುತ್ತದೆ. ಹಾಗಾಗಿ ಯಾರೂ ಆಹಾರ ಹೇರಿಕೆ ಎಂದು ಕೂಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಮತ್ತೊಬ್ಬ ಬಳಕೆದಾರ, ಉತ್ತರ ಭಾರತದಲ್ಲಿರುವ ಶೇ 99 ರೆಸ್ಟೋರೆಂಟ್‌ಗಳಲ್ಲಿ ಇಡ್ಲಿ- ದೋಸೆ ಸಿಗುತ್ತಿದೆ. ಹೌದು ಆಹಾರದ ಹೇರಿಕೆ ಸಾರ್ ಎಂದು ವ್ಯಂಗ್ಯವಾಗಿ ಟೀಕಿಸಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದ್ವಿಭಾಷಾ ನೀತಿ ವಿವಾದ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹಿಂದಿ ಭಾಷೆ ಹೇರಿಕೆ ಕುರಿತ ಚರ್ಚೆ ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ನಡೆದಿತ್ತು. ಅದರ ಬೆನ್ನಿಗೆ ಈ ಆಹಾರದ ಚರ್ಚೆ ಗಮನಸೆಳೆದಿದೆ. ಬೆಂಗಳೂರಿನ ಕೆಂಪೆಗೌಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌ಗಳಿಂದ ಹಿಂದಿಯನ್ನು ತೆಗೆದು ಹಾಕಬೇಕು ಎಂದು ವ್ಯಕ್ತಿಯೊಬ್ಬರು ಹೇಳಿದ ನಂತರ ಚರ್ಚೆ ಕಾವು ಹೆಚ್ಚಾಗಿತ್ತು. ಕೆಲವರು ಇದೊಳ್ಳೆ ಐಡಿಯಾ, ಕರ್ನಾಟಕದಲ್ಲಿ ಇಂಗ್ಲಿಷ್ ಮತ್ತು ಕನ್ನಡ ಮಾತ್ರ. ದ್ವಿ ಭಾಷಾ ನೀತಿ ಅನುಸರಣೆಯಾಗಲಿ ಎಂದು ಹಾರೈಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸೈನ್‌ಬೋರ್ಡ್‌ಗಳಿಂದ ಹಿಂದಿ ತೆಗೆಯಲಾಗಿದೆ. ಇಂಗ್ಲಿಷ್ ಮತ್ತು ಕನ್ನಡ ಮಾತ್ರ ಇದೆ. ಹಿಂದಿ ಭಾಷಾ ಹೇರಿಕೆ ವಿರೋಧದ ಕಾರಣ ಹೀಗಾಗಿದೆ ಎಂದು ಒಬ್ಬ ಬಳಕೆದಾರ ಟ್ವೀಟ್ ಮಾಡಿದ್ದರು.