ಮಹಾಭಾರತ ಕಥೆಗಳು; ದೇವೇಂದ್ರನ ವರದಿಂದ ಅರ್ಜುನನಿಗೆ ಜನ್ಮ ನೀಡಿದ ಕುಂತಿ; ಅಶ್ವಿನಿ ದೇವತೆಗಳಿಂದ ನಕುಲ-ಸಹದೇವರನ್ನು ಪಡೆದ ಮಾದ್ರಿ

ಮಾದ್ರಿಯು , ಅಕ್ಕ ಕುಂತಿ ಹೇಳಿಕೊಟ್ಟ ಮಂತ್ರದ ಸಹಾಯದಿಂದ ಅಶ್ವಿನಿ ದೇವತೆಗಳನ್ನು ಆಮಂತ್ರಿಸುತ್ತಾಳೆ. ಆಗ ಅಶ್ವಿನಿ ದೇವತೆಗಳು ಮಾದ್ರಿಯ ಎದುರು ಪ್ರತ್ಯಕ್ಷವಾಗುತ್ತಾರೆ. ಅಶ್ವಿನಿ ದೇವತೆಗಳು ಮಾದ್ರಿಗೆ ಅವಳಿ ಮಕ್ಕಳನ್ನು ದಯ ಪಾಲಿಸುತ್ತಾರೆ. ಅವರಲ್ಲಿ ಸೌಂದರ್ಯದಲ್ಲಿ ಸಾಟಿ ಇರದಂತಹ, ಯಾರಿಗೂ ಹೋಲಿಕೆ ಮಾಡಲಾಗದಂತಹ ಮಗು ಇರುತ್ತದೆ. ಅವನೇ ನಕುಲ. ಭವಿಷ್ಯವನ್ನು ಕರಾರುವಕ್ಕಾಗಿ ನುಡಿಯುವ, ಊಹಿಸಲು ಅಸಾಧ್ಯವಾದಷ್ಟು ಜ್ಞಾನವನ್ನು ಪಡೆದಿರುವ ಎರಡನೆಯ ಮಗುವೇ ಸಹದೇವ. ಈ ಇಬ್ಬರು ವೈಶಾಖ ಮಾಸದ ಬಹುಳ ಚತುರ್ದಶಿಯ ಶುಕ್ರವಾರದಂದು ಜನಿಸುತ್ತಾರೆ. ಇವರು ಜನಿಸಿದ ಸಮಯದಲ್ಲೂ ಶುಭ ಸೂಚನೆಗಳು ಉಂಟಾಗುತ್ತದೆ. ಐವರೂ ಮಕ್ಕಳ ಜೊತೆ ಪಾಂಡುರಾಜನು ಕಾಡಿನಲ್ಲಿ ತನ್ನ ಪತ್ನಿಯರ ಜೊತೆ ಜೀವನ ನಡೆಸುತ್ತಿರುತ್ತಾನೆ. ಆ ಖುಷಿಯಲ್ಲಿ ಅವರಿಗೆ ಹಸ್ತಿನಾಪುರದ ನೆನಪೇ ಆಗುವುದಿಲ್ಲ. ವಸುದೇವನು ಕಶ್ಯಪನ ಮೂಲಕ ಸೋದರಿ ಕುಂತಿಗೆ ಕಾಣಿಕೆಯನ್ನು ಕಳುಹಿಸಿ ಕೊಡುತ್ತಾನೆ. ಕಶ್ಯಪರ ಸಲಹೆಯಂತೆ, ಅವರ ಜವಾಬ್ದಾರಿಯಲ್ಲಿ ಪಾಂಡುವಿನ ಮಕ್ಕಳಿಗೆ ಚೌಲ, ನಾಮಕರಣ ಮತ್ತು ಉಪನಯನ ಮಾಡಲಾಗುತ್ತದೆ.