ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿ ಯಾರು; ಏಕನಾಥ್ ಶಿಂಧೆ, ದೇವೇಂದ್ರ ಫಡ್ನವಿಸ್ ಉತ್ತರ ಹೀಗಿತ್ತು

Maharashtra Election Results: ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ), ಶಿವಸೇನೆ ಮತ್ತು ಎನ್‌ಸಿಪಿ ಮೈತ್ರಿಕೂಟವು ಭರ್ಜರಿ ಗೆಲುವಿನ ಹಾದಿಯಲ್ಲಿರುವಾಗ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ಉಪ ದೇವೇಂದ್ರ ಫಡ್ನವಿಸ್ ಎಲ್ಲರನ್ನೂ ಕಾಡುತ್ತಿದ್ದ “ಮಹಾರಾಷ್ಟ್ರದ ಮುಂದಿನ ಸಿಎಂ ಯಾರು” ಎಂಬ ದೊಡ್ಡ ಪ್ರಶ್ನೆಗೆ ಉತ್ತರಿಸಿದರು. ಮಹಾರಾಷ್ಟ್ರ ಚುನಾವಣೆ ಫಲಿತಾಂಶ ಇನ್ನೂ ಪೂರ್ತಿಯಾಗಿ ಪ್ರಕಟವಾಗಿಲ್ಲ. ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ, ಬಿಜೆಪಿ 118ರಲ್ಲಿ ಗೆಲುವು ದಾಖಲಿಸಿದ್ದು, 14ರಲ್ಲಿ ಮುನ್ನಡೆಯಲ್ಲಿದೆ. ಶಿವಸೇನಾ 52ರಲ್ಲಿ ಗೆಲುವು ದಾಖಲಿಸಿ, 5ರಲ್ಲಿ ಮುನ್ನಡೆ ಹೊಂದಿದೆ. ಎನ್‌ಸಿಪಿ 39ರಲ್ಲಿ ಗೆಲುವು ದಾಖಲಿಸಿದ್ದು, 2ರಲ್ಲಿ ಮುನ್ನಡೆಯಲ್ಲಿದೆ. ಒಟ್ಟು ಮಹಾಯುತಿ ಮೈತ್ರಿಯಲ್ಲಿ ಈ ಮೂರು ಪಕ್ಷಗಳು 230 ಸ್ಥಾನಗಳನ್ನು ಖಾತ್ರಿ ಮಾಡಿಕೊಂಡಿವೆ. 288 ಸ್ಥಾನಗಳ ವಿಧಾನಸಭೆಯಲ್ಲಿ ಆಡಳಿತ ನಡೆಸುವುದಕ್ಕೆ ಸರಳ ಬಹುಮತ 145 ಸ್ಥಾನಗಳ ಗೆಲುವು. ಇದು ಭರ್ಜರಿ ಗೆಲುವು ಆಗಿದ್ದು, ಬಿಜೆಪಿಗೆ ಹೆಚ್ಚು ಸ್ಥಾನಗಳು ಸಿಕ್ಕಿವೆ. ಸಹಜವಾಗಿಯೆ ಎಲ್ಲರ ನೋಟವೂ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮೇಲೆ ಕಡೆಗೆ ಹೊರಳಿದೆ.