ಯುಐ ಸಿನಿಮಾ ವಿಮರ್ಶೆ: ಉಪ್ಪಿ ಅಧ್ಯಾತ್ಮ
UI Movie Review: ಸಮಾಜದಲ್ಲಿ ಬದಲಾವಣೆ ತರುವ ಸಂದೇಶವನ್ನು ಸಿನಿಮಾ ಮಾಧ್ಯಮದ ಮೂಲಕ ಜನರಿಗೆ ತಲುಪಿಸುವ ಉಪೇಂದ್ರ ಪ್ರಯತ್ನ ನಿರಂತರ. ಉಪೇಂದ್ರ ಮಾತುಗಳು, ಆಲೋಚನೆಗಳು ಆಳವಾದ ಅರ್ಥ ಹೊಂದಿರುತ್ತವೆ. ಅವರ ಮಾತುಗಳು ಅರ್ಥವಾಗಬೇಕಾದರೆ “ಫೋಕಸ್” ಅಗತ್ಯ. ಯುಐ ಸಿನಿಮಾ ಕೂಡ “ಫೋಕಸ್” ಕಡೆಗೆ ಗಮನ ನೀಡಿದೆ. ಈ ಸಿನಿಮಾದ ನಿಜವಾದ ಹೀರೋ “ಮೆದುಳು” ಎಂದರೂ ತಪ್ಪಾಗದು. ಅದು ಉಪೇಂದ್ರ ಮೆದುಳೂ ಹೌದು. ಮೊಬೈಲ್ ರೀಲ್ಸ್‌ಗಳಲ್ಲಿ, ಸುದ್ದಿ ವಾಹಿನಿಗಳು ನೀಡುವ “ಮಹಾ ಕದನ ಸುದ್ದಿಗಳ” ಮೂಲಕ, ಸೆಲೆಬ್ರಿಟಿಗಳ ಸುದ್ದಿಗಳನ್ನು ಎಂಜಾಯ್ ಮಾಡುತ್ತ ಜನರು ಫೋಕಸ್ ಕಳೆದುಕೊಂಡಿದ್ದಾರೆ. ಇಂತಹ ಗದ್ದಲಗಳ ನಡುವೆ ಕಳೆದುಹೋಗಿರುವ ಜನರ “ಮೆದುಳಿಗೆ ಮೇವು” ನೀಡುವ ಪ್ರಯತ್ನವನ್ನು ಉಪೇಂದ್ರ ಯುಐ ಚಿತ್ರದಲ್ಲಿ ಮಾಡಿದ್ದಾರೆ. ಈ ಸಮಾಜಕ್ಕೆ ನಾನು ಏನು ಹೇಳಲು ಹೊರಟಿರುವೆ ಎಂಬ ಸಿನಿಮಾ ನಿರ್ದೇಶಕನ ದ್ವಂದ್ವವನ್ನು ಉಪೇಂದ್ರ ಇಲ್ಲಿ ವ್ಯಕ್ತಪಡಿಸಿದ್ದಾರೆ. ಎರಡು ಫೈಟಿಂಗ್, ಚಪ್ಪಾಳೆ ಗಿಟ್ಟಿಸುವಂತಹ ಡೈಲಾಗ್‌ಗಳು ಇರುವ, ಸಾಕಷ್ಟು ಮನರಂಜನೆ ಇರುವ ಸಿನಿಮಾ ಮಾಡಲೇ? ಈ ಸಮಾಜದಲ್ಲಿ ಎಲ್ಲರ ಕಣ್ಣೆದುರು ನಡೆಯುತ್ತಿರುವ ತಪ್ಪುಗಳ ಕುರಿತು ಜನರಲ್ಲಿ ಅರಿವು ಮೂಡಿಸಲೇ ಎಂಬ ಗೊಂದಲವನ್ನು ಯುಐ ಸಿನಿಮಾದೊಳಗಿನ ನಿರ್ದೇಶಕ ಉಪೇಂದ್ರ ವ್ಯಕ್ತಪಡಿಸುತ್ತಾರೆ. ಇದರೊಂದಿಗೆ ಈ ಚಿತ್ರದಲ್ಲಿ ಉಪೇಂದ್ರ ಕನಸಿನ “ಪ್ರಜಾಕೀಯ ಜಗತ್ತಿನ” ಪರಿಕಲ್ಪನೆಯೂ ಢಾಳಾಗಿ ಗೋಚರಿಸಿದೆ. ಸಿನಿಮಾ ಪೂರ್ಣ ಪ್ರಮಾಣದಲ್ಲಿ “ಉಪ್ಪಿ ಅಧ್ಯಾತ್ಮ” ಎಂದರೂ ತಪ್ಪಾಗದು.