ಯುಗಾದಿ ದಿನಾಂಕ, ಸಮಯ ಮತ್ತು ದೇವರ ಪೂಜೆ ವಿವರ ತಿಳ್ಕೊಂಡು ಶ್ರೀ ವಿಶ್ವಾವಸು ನಾಮ ಸಂವತ್ಸರ ಬರಮಾಡಿಕೊಳ್ಳೋಣ

ಯುಗಾದಿ ಆಚರಣೆ ಚಂದ್ರ ಹಾಗೂ ಸೂರ್ಯನ ಚಲನೆಯನ್ನಾಧರಿಸಿರುವಂತಹ ಹಬ್ಬ. ಕರ್ನಾಟಕದ ಬಹುಭಾಗದ ಜನರು ಮತ್ತು ಆಂಧ್ರ ಪ್ರದೇಶದವರು ಚಾಂದ್ರಮಾನ ಯುಗಾದಿಯನ್ನು ಆಚರಿಸುತ್ತಾರೆ. ಅಂತೆಯೇ ಗೋವಾ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಯುಗಾದಿಯನ್ನು ಗುಡಿಪಡ್ವಾ ಎಂಬ ಹೆಸರಿನಲ್ಲಿ ಪ್ರತಿಯೊಂದು ಮನೆಗಳ ಮುಂದೆಯೂ ಗುಢಿ (ರೇಷ್ಮೆಯ ಧ್ವಜ ಅಥವಾ ಬಟ್ಟೆ)ಯನ್ನು ಒಂದು ಕೋಲಿನ ತುದಿಗೆ ಕಟ್ಟಿ ಮನೆಯ ಮುಂದೆ ನಿಲ್ಲಿಸುವ ಪದ್ದತಿ ಚಾಲ್ತಿಯಲ್ಲಿದೆ. ತಮಿಳುನಾಡು, ಕೇರಳ ಮತ್ತು ಕರಾವಳಿ ಭಾಗದ ಕರ್ನಾಟಕದವರು ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ. ಯುಗಾದಿ ಎಂಬ ಪದವು ಸಂಸ್ಕೃತ ಪದಗಳಾದ ‘ಯುಗ’ (ಯುಗ) ಮತ್ತು ‘ಆದಿ’ (ಆರಂಭ) ಪದಗಳಿಂದ ಬಂದಿದೆ. ಯುಗಾದಿ ಎಂಬುದು ಹೊಸ ವರ್ಷಾರಂಭದ ಸೂಚನೆ. ಹಾಗಾಗಿ, ಯುಗಾದಿ ಎಂಬ ಪದ ಗಮನಸೆಳೆದ ಕೂಲೇ ಯುಗಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ ಎಂಬ ದ. ರಾ. ಬೇಂದ್ರೆಯವರ ಜನಪ್ರಿಯ ಭಾವಗೀತೆ ಸಾಲುಗಳು ನೆನಪಾಗುವದು ಸಹಜ. ಶ್ರೀಕ್ರೋಧಿ ನಾಮ ಸಂವತ್ಸರ ಮುಗಿದು, ಶ್ರೀವಿಶ್ವಾವಸು ಸಂವತ್ಸರ ಈ ಯುಗಾದಿಯೊಂದಿಗೆ ಶುರವಾಗಲಿದೆ.