ರಷ್ಯಾ- ಉಕ್ರೇನ್ ದೇಶಗಳ ನಡುವಿನ ಮೂರು ವರ್ಷ ದಾಟಿದ ನಿರಂತರ ಯುದ್ದ ದಿನಗಳ ಹಾದಿ ಹೀಗಿದೆ

Russia Ukraine War: ಜಗತ್ತಿನ ಶಕ್ತಿ ಶಾಲಿ ದೇಶಗಳ ಪಟ್ಟಿಯಲ್ಲಿರುವ ರಷ್ಯಾ ಹಾಗೂ ನೆರೆಯ ಉಕ್ರೇನ್ ದೇಶದ ನಡುವೆ ಯುದ್ದ ಮುಕ್ತಾಯದ ಹಾದಿಗೆ ಬರುತ್ತಿದೆ. ಸತತ ಮೂರು ವರ್ಷ, ಒಂದು ಸಾವಿರ ದಿನಗಳನ್ನು ದಾಟಿ ಎರಡೂ ದೇಶಗಳು ಪ್ರತಿಷ್ಠೆಗೆ ಬಿದ್ದು ಯುದ್ದೋನ್ಮಾದ ಪ್ರದರ್ಶಿಸಿವೆ. ಇದರಿಂದ ಅಪಾರ ಪ್ರಮಾಣದಲ್ಲಿ ಸಾವು ನೋವುಗಳು ಎರಡೂ ದೇಶದಲ್ಲಿ ಸಂಭವಿಸಿವೆ. ಸಾರ್ವಜನಿಕ ಆಸ್ತಿ ಪಾಸ್ತಿಗಳು, ಕಟ್ಟಡಗಳು, ಸ್ಮಾರಕಗಳು ಮಣ್ಣುಪಾಲಾಗಿವೆ. ಅದರಲ್ಲೂ ಉಕ್ರೇನ್ ಸರ್ವನಾಶದ ಹಂತಕ್ಕೆ ಬಂದು ನಿಂತಿದೆ. ಅಮೆರಿಕದಲ್ಲಿ ತಿಂಗಳ ಹಿಂದೆಯಷ್ಟೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಬಂದ ನಂತರ ಯುದ್ದದ ಚಿತ್ರಣ ಬದಲಾಗಬಹುದೇ ಎನ್ನುವ ಚರ್ಚೆಗಳು ನಡೆದಿದ್ದವು. ಭಾರೀ ನೆರವಿನ ಮಹಾಪೂರವೇ ಉಕ್ರೇನ್ ಪರ ಹರಿದು ಬಂದಿತ್ತು. ಈಗ ಮತ್ತೆ ನೆರವಿನ ಬೇಡಿಕೆ ಅಮೆರಿಕದ ಮೇಲೆ ಉಕ್ರೇನ್ ಹಾಕಿತ್ತು. ಅಲ್ಲದೇ ಕೆಲವು ನೀತಿಗಳ ಬಗ್ಗೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಬಹಿರಂಗವಾಗಿ ಟೀಕಿಸಿದ್ದರು. ಇದರ ಬೆನ್ನಲ್ಲೇ ಉಕ್ರೇನ್ ಒತ್ತಡದ ನಂತರ ಕದನ ವಿರಾಮವನ್ನು ಘೋಷಣೆ ಮಾಡಿದೆ. ಆದರೆ ಯುದ್ದ ಆರಂಭಿಸಿದ್ದ ರಷ್ಯಾದ ಮನಸ್ಥಿತಿ ಹೇಗಿದೆ ಎನ್ನುವುದು ಆ ದೇಶದ ಮುಖ್ಯಸ್ಥ ವ್ಲಾಡಿಮಿರ್ ಪುಟಿನ್ ಪ್ರತಿಕ್ರಿಯೆ ಬಳಿಕ ತಿಳಿದು ಬರಲಿದೆ. ಎರಡೂ ದೇಶಗಳ ಸುದೀರ್ಘ ಯುದ್ದ ಹಾದಿನ ಕಿರುನೋಟ ಇಲ್ಲಿದೆ.