ಬಾಂಗ್ಲಾದೇಶದಲ್ಲಿ ಇಸ್ಕಾನ್‌ನ ಚಿನ್ಮಯ ಕೃಷ್ಣ ಪ್ರಭು ದಾಸ್ ಬಂಧನ, ಈವರೆಗಿನ ಪ್ರಮುಖ 10 ವಿದ್ಯಮಾನಗಳಿವು

ISKCON Bangladesh: ಮುಸ್ಲಿಂ ಬಾಹುಳ್ಯದ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದವರ ರಕ್ಷಣೆಗಾಗಿ ಧ್ವನಿ ಎತ್ತಿರುವ ಹಿಂದೂ ಧಾರ್ಮಿಕ ನಾಯಕ ಚಿನ್ಮಯ ಕೃಷ್ಣ ಪ್ರಭು ದಾಸ್ ಅವರನ್ನು ಬಾಂಗ್ಲಾದೇಶ ಪೊಲೀಸರು ಸೋಮವಾರ (ನವೆಂಬರ್ 25) ಬಂಧಿಸಿದ್ದಾರೆ. ರಾಷ್ಟ್ರದ್ರೋಹದ ಕೇಸ್ ದಾಖಲಿಸಿದ್ದು, ಕೋರ್ಟ್ ಅವರಿಗೆ ಜಾಮೀನು ನಿರಾಕರಿಸಿದೆ. ಈ ವಿದ್ಯಮಾನ ಜಾಗತಿಕವಾಗಿ ಖಂಡನೆಗೊಳಗಾಗಿದೆ. ಕೃಷ್ಣ ಪ್ರಭು ದಾಸ್ ಎಂದೇ ಖ್ಯಾತರಾಗಿರುವ ಇಸ್ಕಾನ್‌ನ ಸಂತ ಚಿನ್ಮಯ ಕೃಷ್ಣ ದಾಸ್ ಬ್ರಹ್ಮಾಚಾರಿ ಅವರು, ಬಾಂಗ್ಲಾದೇಶದಲ್ಲಿ ಹಾಡುಹಗಲೇ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಿಂದೂಗಳ ಹತ್ಯೆ ವಿರೋಧಿಸಿ ಪ್ರತಿಭಟನಾ ಮೆರವಣಿಗೆಗಳ ನೇತೃತ್ವವಹಿಸಿದ್ದರು. ಅಲ್ಲಿನ ಸರ್ಕಾರದ ಮೇಲೆ ಒತ್ತಡ ಹೇರಿ, ಹಿಂದೂಗಳಿಗೆ ರಕ್ಷಣೆ ಒದಗಿಸಬೇಕು ಎಂದು ಬಲವಾಗಿ ಆಗ್ರಹಿಸಿದ್ದರು. ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅವರ ಸರ್ಕಾರ ಪತನವಾದ ಬಳಿಕ ಹಿಂದೂಗಳ ಮೇಲಿನ ದೌರ್ಜನ್ಯ, ಹಿಂಸಾಚಾರ ಮೇರೆಮೀರಿದೆ. ಇದೀಗ, ಇಸ್ಕಾನ್ ಅನ್ನು ಮೂಲಭೂತವಾದಿ ಸಂಘಟನೆಯಾಗಿದ್ದು, ಅದನ್ನು ನಿಷೇಧಿಸಬೇಕು ಎಂಬ ಆಗ್ರಹ ಬಾಂಗ್ಲಾದೇಶದಲ್ಲಿ ವ್ಯಕ್ತವಾಗಿದೆ.