ವಾಸ್ತುಶಿಲ್ಪಕ್ಕೆ ತಂಜಾವೂರಿನ ಬೃಹದೇಶ್ವರ, ಚೋಳ ಸಾಮ್ರಾಜ್ಯವೇ ಬೃಹತ್ ವಿಶ್ವವಿದ್ಯಾಲಯ, ವಿಶ್ವಕ್ಕೆ ತಿಳಿಯಬೇಕಿದೆ ಈ ಸತ್ಯ; ರಾಜೀವ ಹೆಗಡೆ ಬರಹ
ದೇವಾಲಯದೊಳಗೆ ನಾವು ಕಾಲಿಡುತ್ತಿದ್ದಂತೆ ಮುಖ್ಯ ದ್ವಾರವನ್ನು ಮುಚ್ಚಿಬಿಟ್ಟರು. ಒಳಗೆ ನೋಡುತ್ತಿದ್ದಂತೆಯೇ ಶಿವಲಿಂಗವಿರುವ ಗರ್ಭಗುಡಿಗೂ ಕರ್ಟನ್ ಹಾಕಿಡಲಾಗಿತ್ತು. ಅಂದಿನ ಅಂತಿಮ ಪೂಜೆಯ ಕೊನೆಯ ಕ್ಷಣಕ್ಕೆ ನಾವು ಸಾಕ್ಷಿ ಆಗುತ್ತಿದ್ದೆವು. ಗರ್ಭಗುಡಿಗೆ ಇನ್ನೆರಡು ಬಾಗಿಲು ಇರುವ ಜಾಗದಿಂದಲೇ ಎಲ್ಲವನ್ನೂ ನೋಡುತ್ತಿದ್ದೆವು. ಆ ಕೊನೆಯ ಕ್ಷಣದಲ್ಲಿ ಧೂಪಾರತಿ ಆಗುತ್ತಿದ್ದಂತೆ ಕರ್ಟನ್‌ನ್ನು ಒಂದೇ ಸಮನೇ ಪಕ್ಕಕ್ಕೆ ಸರಿಸಿದಾಗ ಬೃಹದೇಶ್ವರನ ದರ್ಶನವಾಯಿತು. ಆ ದಿನದಲ್ಲಿ ಮತ್ತೊಮ್ಮೆ ರೋಮಾಂಚನಗೊಳ್ಳುವ ಸದವಕಾಶ ನನ್ನ ಪಾಲಿಗೆ ದೊರೆತಿತ್ತು. ಆ ಕ್ಷಣದಲ್ಲಿನ ಏನಾಗುತ್ತಿದೆ ಎನ್ನುವ ಅರಿವು ಕೂಡ ನನಗಿರದ ಸ್ಥಿತಿಯಲ್ಲಿದ್ದೆ. ಅದೇ ಅನುಭೂತಿಯಲ್ಲಿ ಉತ್ಸವ ಮೂರ್ತಿಯನ್ನು ಪಾರ್ವತಿ ದೇವಾಲಯಕ್ಕೆ ಕೊಂಡೊಯ್ಯುವ ತನಕ ನಡೆದುಕೊಂಡು ಬಂದು, ರಾತ್ರಿ ಹೋಟೆಲ್‌ಗೆ ತಲುಪಿದೆ. ಈ ವೈಭವವನ್ನು ಒಮ್ಮೆ ಅನುಭವಿಸಿದರೆ ಸಾಲದು ಎನ್ನುವ ಕಾರಣಕ್ಕೆ ಮತ್ತೆ ಮರುದಿನ ಸಂಜೆಯೂ ದೇವಾಲಯಕ್ಕೆ ಬಂದೆ. ಮೊದಲ ದಿನವಾಗಿದ್ದ ಎಲ್ಲ ಅನುಭವವೂ ಎರಡನೇ ದಿನವೂ ಆಯಿತು. ಅಲ್ಲಿಂದ ಹೊರಕ್ಕೆ ಬರುವಾಗ ಅನಿಸಿದ್ದೇನೆಂದರೆ, ಇಲ್ಲಿ ನೂರು ಬಾರಿ ಬಂದರೂ ಇದೇ ಅನುಭೂತಿ ಸಿಗುತ್ತದೆ. ಅದಕ್ಕಾಗಿಯೇ ಮತ್ತೆ ಮರುದಿನ ಬೆಳಗ್ಗೆ ಕೂಡ ಬೃಹದೇಶ್ವರನ ಪ್ರಾಂಗಣಕ್ಕೆ ಬಂದು, ಸೂರ್ಯನ ಮೊದಲ ರಶ್ಮಿ ಬೀಳುವ ಸೌಂದರ್ಯವನ್ನು ಸವಿದೆ. ಅಷ್ಟಾದರೂ ಬೃಹದೇಶ್ವರನನ್ನು ನೋಡಿದ ತೃಪ್ತಿಯಾಗಲೇ ಇಲ್ಲ. ಅಲ್ಲಿಂದ ಹೋಗಲೂ ಮನಸ್ಸಾಗಲಿಲ್ಲ. ಹಾಗೆಯೇ ಮತ್ತೆ ಶೀಘ್ರವೇ ಮಹಾಬಲಿಪುರಂ, ಚಿದಂಬರಂ, ಗಂಗೈಕೊಂಡ, ಕುಂಭಕೋಣಂ ಹಾಗೂ ತಂಜಾವೂರಿಗೆ ಪ್ರವಾಸ ಬರಬೇಕು ಎನ್ನುವ ಪ್ಲ್ಯಾನ್ ಕೂಡ ಸಿದ್ಧವಾಯಿತು. ಏಕೆಂದರೆ ತಂಜಾವೂರಿನ ಸೆಳೆತ ಹಾಗಿದೆ.