Latest Kannada Nation & World
ಸಿಎಸ್‌ಕೆ ಗರ್ವಭಂಗ; 17 ವರ್ಷಗಳ ಬಳಿಕ ಚೆಪಾಕ್ ಅಂಗಳದಲ್ಲಿ ಗೆದ್ದು ಬೀಗಿದ ಆರ್‌ಸಿಬಿ, ತವರಲ್ಲಿ ಯೆಲ್ಲೋ ಆರ್ಮಿ ಮೌನಕ್ಕೆ ಶರಣು

17 ವರ್ಷ, ಹೌದು ಬರೋಬ್ಬರಿ 17 ವರ್ಷಗಳ ನಂತರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆತಿಥೇಯ ಸಿಎಸ್‌ಕೆ ತಂಡದ ಗರ್ವಭಂಗವಾಗಿದೆ. 2008ರ ನಂತರ ಇದೇ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅವರದ್ದೇ ನೆಲದಲ್ಲಿ ಆರ್‌ಸಿಬಿ ಬಗ್ಗುಬಡಿದಿದೆ. ಪ್ರತಿಬಾರಿಯೂ ಸಿಎಸ್‌ಕೆ, ಸಿಎಸ್‌ಕೆ ಎಂದು ಬೊಬ್ಬಿಡುತ್ತಿದ್ದ ಯೆಲ್ಲೋ ಆರ್ಮಿ ಅಭಿಮಾನಿಗಳು, ಬಹುಶಃ ಇದೇ ಮೊದಲ ಬಾರಿಗೆ ಚೆಪಾಕ್ ಮೈದಾನದಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಸುತ್ತಲೂ ಹಳದಿಮಯವಾಗಿ ಕಾಣುತ್ತಿದ್ದ ತುಂಬಿದ ಚೆಪಾಕ್ ಮೈದಾನದಲ್ಲಿ ಅಲ್ಲಲಿ ಕಾಣುತ್ತಿದ್ದ ಆರ್‌ಸಿಬಿ ಫ್ಯಾನ್ಸ್ ‘ಆರ್‌ಸಿಬಿ, ಆರ್‌ಸಿಬಿ’ ಎಂದು ಉದ್ಘೋಷ ಮೊಳಗಿಸಿದ್ದಾರೆ. ಸಿಎಸ್‌ಕೆ ತಂಡದ ತವರಿನ ಲಾಭವನ್ನು ಮೆಟ್ಟಿನಿಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು, 50 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಪ್ರಸಕ್ತ ಆವೃತ್ತಿಯಲ್ಲಿ ಆರ್‌ಸಿಬಿ ತಂಡಕ್ಕೆ ಇದು ಸತತ ಎರಡನೇ ಗೆಲುವು.