ಹಲ್ದಿರಾಮ್ಸ್ ಬ್ರಾಂಡ್ ಅರಬ್ಬಿಯ ಶೇಖ್ ತೆಕ್ಕೆಗೆ ಬೀಳುತ್ತಾ, 5165 ಕೋಟಿ ರೂ ಡೀಲ್‌ಗೆ ಮಾತುಕತೆ

Haldiram: ಸೋನ್ ಪಾಪಡಿಯಿಂದ ಹಿಡಿದು ಇನ್‌ಸ್ಟಂಟ್ ಬೇಲ್ ತನಕ 500ಕ್ಕೂ ಹೆಚ್ಚು ವೆರೈಟಿಯ ಕುರುಕಲು ತಿನಿಸುಗಳು ಹಾಗೂ ಸಿಹಿ ತಿನಿಸುಗಳ ಮೂಲಕ ಮನೆಮಾತಾಗಿರುವ ಬ್ರ್ಯಾಂಡ್ ಹಲ್ದಿರಾಮ್ಸ್ ಸದ್ಯ ಸುದ್ದಿಯ ಕೇಂದ್ರ ಬಿಂದು. ಹಲ್ದಿರಾಮ್ಸ್ ಸ್ನ್ಯಾಕ್ಸ್ ಫುಡ್ ಕಂಪನಿಯು ತನ್ನ ಷೇರುಗಳನ್ನು ಮಾರಾಟ ಮಾಡಿ ಜಾಗತಿಕ ಪಾಲುದಾರಿಕೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಹಲ್ದಿರಾಮ್ಸ್ ಸದ್ಯ ಮೂರನೇ ತಲೆಮಾರಿನ ಮಾಲೀಕತ್ವ ಚಾಲ್ತಿಯಲ್ಲಿದ್ದು, ವ್ಯಾಪಾರ ವಿಸ್ತರಣೆ ನಡೆದಿದ್ದು, ಅವರ ಪಾಲು ಕಡಿಮೆಯಾಗುತ್ತ ಸಾಗಿದೆ. ಸಿಂಗಾಪುರ ಮೂಲದ ಟೆಮಾಸೆಕ್ ಕಂಪನಿ ಜತೆಗೆ ಶೇಕಡ 10 ಪಾಲುದಾರಿಕೆ ಒಪ್ಪಂದ ಮುಗಿಸಿರುವ ಹಲ್ದಿರಾಮ್ಸ್, ಯುನೈಟೆಡ್ ಸ್ಟೇಟ್ಸ್ ಆಫ್ ಅರಬ್ ಎಮಿರೇಟ್ಸ್‌ನ ಅತಿಶ್ರೀಮಂತ ಭದ್ರತಾ ಸಲಹೆಗಾರ, ಒಂದೂವರೆ ಲಕ್ಷ ಕೋಟಿ ಡಾಲರ್ ವ್ಯಾಪಾರ ಸಾಮ್ರಾಜ್ಯ ಹೊಂದಿರುವ ಶೇಖ್ ತಹ್ನೂನ್ ಬಿನ್ ಝೈಯದ್ ಅವರ ಚಿಮೆರಾ ಕ್ಯಾಪಿಟಲ್ ಬೆಂಬಲಿತ ಆಲ್ಫಾ ವೇವ್ ಗ್ಲೋಬಲ್‌ಗೆ ( ಈ ಹಿಂದೆ ಫಾಲ್ಕನ್ ಎಡ್ಜ್ ಕ್ಯಾಪಿಟಲ್) ಶೇಕಡ 6 ಷೇರುಗಳ ಮಾರಾಟಕ್ಕೆ ಮಾತುಕತೆ ನಡೆದಿದೆ. ಶೇಕಡ 6 ಷೇರುಗಳು ಅಂದರೆ ಅದು ಅಂದಾಜು 5,165 ಕೋಟಿ ರೂಪಾಯಿ ಮೌಲ್ಯದ್ದು ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.