Latest Kannada Nation & World

ದಕ್ಷ ಕನ್ನಡಿಗ ಅಧಿಕಾರಿಯನ್ನು ಬಲಿ ಹಾಕಿದ ಪ್ರಚಾರ ಪ್ರಿಯ ದುರುಳರು; ರಾಜೀವ ಹೆಗಡೆ ಬರಹ

Share This Post ????

ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ಉಂಟಾದ ಸಾವು–ನೋವಿನ ಪ್ರಕರಣಕ್ಕೆ ಸಂಬಂಧಿಸಿ ದಕ್ಷ ಕನ್ನಡಿಗ ಅಧಿಕಾರಿಯನ್ನು ಬಲಿ ಹಾಕಿದ ಪ್ರಚಾರ ಪ್ರಿಯ ದುರುಳರು ಎಂದು ಪತ್ರಕರ್ತ ರಾಜೀವ ಹೆಗಡೆ ಅಭಿಪ್ರಾಯಪಟ್ಟಿದ್ದು, ಅದನ್ನು ಅವರು ವಿವರಿಸಿದ್ದು ಹೀಗೆ –

ಆರ್‌ಸಿಬಿ ವಿಜಯೋತ್ಸವ ಕಾಲ್ತುಳಿತ ಕೇಸ್: ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರನ್ನು ಸರ್ಕಾರ ಅಮಾನತುಗೊಳಿಸಿದೆ. (ಕಡತ ಚಿತ್ರ)

ಆರ್‌ಸಿಬಿ ವಿಜಯೋತ್ಸವ ಕಾಲ್ತುಳಿತ ಕೇಸ್: ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರನ್ನು ಸರ್ಕಾರ ಅಮಾನತುಗೊಳಿಸಿದೆ. (ಕಡತ ಚಿತ್ರ)

ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ಉಂಟಾದ ಸಾವು–ನೋವಿನ ಪ್ರಕರಣ ನಡೆದ ಒಂದು ದಿನದ ನಂತರ ಕರ್ನಾಟಕ ಸರ್ಕಾರವು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಬಿ. ದಯಾನಂದ್‌ ಸೇರಿದಂತೆ ಹಲವು ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಮಾನತು ಮಾಡಿದೆ. ಸರ್ಕಾರದ ನಡೆ ತೀವ್ರ ಟೀಕೆಗೆ ಒಳಗಾಗಿದ್ದು, ಪತ್ರಕರ್ತ ರಾಜೀವ ಹೆಗಡೆ ಸರ್ಕಾರ ಎಡವಿದ್ದೆಲ್ಲಿ ಎಂಬ ಅಂಶಗಳ ಕಡೆಗೆ ಗಮನಸೆಳೆದಿದ್ದಾರೆ.

ದಕ್ಷ ಕನ್ನಡಿಗ ಅಧಿಕಾರಿಯನ್ನು ಬಲಿ ಹಾಕಿದ ಪ್ರಚಾರ ಪ್ರಿಯ ದುರುಳರು!

ಈ ದೇಶದಲ್ಲಿ ಪ್ರತಿಯೊಬ್ಬ ಜನಸಾಮಾನ್ಯರು ಪೊಲೀಸರೆಂದರೆ ಹೆದರುತ್ತಾರೆ. ಹಾಗೆಯೇ ಅದೇ ಪೊಲೀಸರನ್ನು ತೆರೆಯ ಹಿಂದೆ ಬಾಯಿಗೆ ಬಂದಂತೆ ಬೈಯುತ್ತಾರೆ. ಪೊಲೀಸರಿಗೆ ಸಿಗುವಷ್ಟು ಬೈಗುಳಗಳು ಇನ್ಯಾವುದೇ ವ್ಯವಸ್ಥೆಗೆ ಸಿಗದು. ವೈಯಕ್ತಿಕವಾಗಿ ನಾನು ಕೂಡ ಅದೆಷ್ಟೋ ಬಾರಿ ಪೊಲೀಸರ ಅರಾಜಕತೆ ಬಗ್ಗೆ ಬರೆದಿದ್ದೇನೆ. ಆದರೆ ಈ ರಾಜ್ಯದ ಇಬ್ಬರು ಪ್ರಚಾರ ಪ್ರಚಂಡ ರಾಜಕಾರಣಿಗಳ ಹುಚ್ಚಾಟದಲ್ಲಿ ಓರ್ವ ದಕ್ಷ ಪೊಲೀಸ ಆಯುಕ್ತರನ್ನು ಅಮಾನತು ಮಾಡಿರುವುದು ಮಾತ್ರ ಆಕ್ಷೇಪಾರ್ಹ ಹಾಗೂ ಅತ್ಯಂತ ದೊಡ್ಡ ದುರಂತ.

ನಾನು ಪತ್ರಕರ್ತನಾಗಿ ಕೆಲಸ ಮಾಡಿದ್ದರೂ ಪೊಲೀಸ್‌ ವ್ಯವಸ್ಥೆಯನ್ನು ಹತ್ತಿರದಿಂದ ನೋಡಿಲ್ಲ. ಆದರೆ, ಇವತ್ತಿನವರೆಗೆ ಮಾನ್ಯ ದಯಾನಂದ್‌ ಅವರ ಬಗ್ಗೆ ಒಂದೇ ಒಂದು ನೆಗೆಟಿವ್‌ ಮಾತುಗಳನ್ನು ಯಾವುದೇ ಒಬ್ಬ ಪತ್ರಕರ್ತ ಸ್ನೇಹಿತರಿಂದ ಕೇಳಿಸಿಕೊಂಡಿಲ್ಲ. ಅಂದ್ಹಾಗೆ ಅತ್ಯಂತ ಪ್ರಾಮಾಣಿಕ ಹಾಗೂ ನಿಷ್ಠುರ ಪತ್ರಕರ್ತರು ಕೂಡ ದಯಾನಂದ್‌ ಅವರ ಕಾರ್ಯವೈಖರಿಯನ್ನು ಹೊಗಳುತ್ತಾರೆ. ಆದರೆ ಕನ್ನಡಿಗ, ದಕ್ಷ ಹಾಗೂ ಓರ್ವ ನಿಷ್ಠುರ ಪೊಲೀಸ್‌ ಆಯುಕ್ತರ ವೃತ್ತಿಯ ಮೇಲೆ ದುರಹಂಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಕಪ್ಪು ಚುಕ್ಕೆ ತಂದಿಟ್ಟರು. ಕ್ಲಬ್‌ವೊಂದರ ಗೆಲುವನ್ನು ಕನ್ನಡದ ಗೆಲುವೆಂದು ಪ್ರಚಾರ ಪಡೆಯಲು ಹೋದ ದುಷ್ಟ ರಾಜಕಾರಣಿಗಳಿಂದ ಓರ್ವ ಪ್ರಾಮಾಣಿಕ ಕನ್ನಡಿಗ ಅಧಿಕಾರಿ ಅಮಾನತು ಶಿಕ್ಷೆಗೆ ಒಳಪಡಬೇಕಾಗುತ್ತಿದೆ.

ವಿಪರ್ಯಾಸವೆಂದರೆ ಹಠಕ್ಕೆ ಬಿದ್ದು ವಿಧಾನಸೌಧದಲ್ಲಿ ಕಾರ್ಯಕ್ರಮ ಮಾಡಿಸಿ ಸೆಲ್ಫಿ ತೆಗೆದುಕೊಂಡವರು ದಯಾನಂದ್‌ ಹಾಗೂ ಇತರ ಪೊಲೀಸ್‌ ಅಧಿಕಾರಿಗಳ ಅಮಾನತು ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಜನಸಾಮಾನ್ಯರ ಹೆಣ ಬಿದ್ದಾಗ ಮೈದಾನದೊಳಕ್ಕೆ ಹೋಗಿ ಸೂತ್ರದಾರರು ಟ್ರೋಫಿಗೆ ಮುತ್ತಿಡುತ್ತಿದ್ದಾಗ, ಹೆಣವನ್ನು ಕೈನಲ್ಲಿ ಇರಿಸಿಕೊಂಡು ಕಣ್ಣೀರು ಹಾಕುತ್ತಿದ್ದ ಪೊಲೀಸರನ್ನು ಮನೆಗೆ ಕಳುಹಿಸಲಾಗಿದೆ. ಆದರೆ ಈ ಅವ್ಯವಸ್ಥೆಯ ಸೂತ್ರದಾರ ಮಾತ್ರ ಮೊಸಳೆ ಕಣ್ಣೀರು ಹಾಕಿಕೊಂಡು ಹುಚ್ಚಾಟ ಆಡುತ್ತಿದ್ದಾರೆ. ದುರಾಡಳಿತ, ಅರಾಜಕತೆಗೂ ಒಂದು ಮಿತಿ ಇರಬೇಕು. ಆದರೆ ತಾವು ಆಡಿದ್ದೇ ಆಟವೆಂದುಕೊಂಡು ಸರಣಿ ತಪ್ಪುಗಳನ್ನು ಮಾಡುತ್ತಿದ್ದರೆ, ಇಂತಹ ದುರಹಂಕಾರಿ ಜೋಡೆತ್ತುಗಳನ್ನು ಎಷ್ಟು ಕಣ್ಣೀರು ಹಾಕಿದರೂ, ಅದೆಷ್ಟೇ ಬೆದರಿಕೆ ಹಾಕಿ ಗದರಿದರೂ ಕ್ಷಮಿಸುವ ಮಾತೇ ಇಲ್ಲ.

ಅಷ್ಟಕ್ಕೂ ದಯಾನಂದ್‌ ಹಾಗೂ ಅವರ ತಂಡ ಮಾಡಿದ ತಪ್ಪೇನು ಎನ್ನುವುದನ್ನು ಈ ರಾಜ್ಯದ ಮುಖ್ಯಮಂತ್ರಿ ಹಾಗೂ ಘನತೆವೆತ್ತ ಕನ್ನಡ ಪ್ರೇಮಿ ಉಪಮುಖ್ಯಮಂತ್ರಿ ವಿವರಿಸಲೇಬೇಕಿದೆ. ಇವರ ತವಡುಕುಟ್ಟುವ ಮಾತುಗಳನ್ನು ಕೇಳುವ ಮೊದಲು, ಒಂದಿಷ್ಟು ವಿಚಾರಗಳನ್ನು ನಾವು ಅರಿಯಲೇಬೇಕಿದೆ. ನಗರ ಪೊಲೀಸರ ದಕ್ಷ ದಂಡಾಧಿಕಾರಿಯನ್ನು ಶಿಕ್ಷಿಸಿ, ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುವ ಈ ಬೇಜವಾಬ್ದಾರಿ ಸರ್ಕಾರದ ಮುಖವಾಡ ಕಳಚಲೇಬೇಕು. ಇವರ ವಿರುದ್ಧ ಇನ್ನೂ ಧ್ವನಿ ಎತ್ತದಿದ್ದರೆ, ಇಡೀ ರಾಜ್ಯವನ್ನು ಬೀದಿಗೆ ತಂದು ಹಾಕುತ್ತಾರೆ.

ಇಂತಹ ಬೇಜವಾಬ್ದಾರಿ, ಸರ್ವಾಧಿಕಾರ ಹಾಗೂ ಅರಾಜಕತೆಯ ಆದೇಶವನ್ನು ವಿರೋಧಿಸಲು ಇರುವ ಸಕಾರಣಗಳನ್ನು ನಾವು ಅರಿಯಲೇಬೇಕು. ಹಾಗೆಯೇ ಪೊಲೀಸರ ಪರವಾಗಿ ನಿಲ್ಲಲೇಬೇಕು. ಪೊಲೀಸರ ಇತರ ವರ್ತನೆಗಳ ಬಗ್ಗೆ ಅದೆಷ್ಟೇ ದೂರು, ದುಮ್ಮಾನು ಇರಬಹುದು. ಈ ವಿಚಾರದಲ್ಲಿ ನಾವೆಲ್ಲರೂ ಪೊಲೀಸರ ಜತೆಗಿರಬೇಕು. ಸರ್ಕಾರದ ನಿರ್ಧಾರದ ವಿರುದ್ಧ ಕೂಗೆಬ್ಬಿಸಬೇಕು.

ಆರ್‌ಸಿಬಿ ಗೆಲ್ಲುವ ಆಶಾಭಾವನೆಯೊಂದಿಗೆ ಮಂಗಳವಾರ ಮಧ್ಯಾಹ್ನದಿಂದಲೇ ಬೆಂಗಳೂರು ಪೊಲೀಸರು ಅಲರ್ಟ್‌ ಆಗಿದ್ದರು. ಅಹಿತಕರ ಘಟನೆಗಳನ್ನು ತಡೆಯಲು ಸಿದ್ಧತೆ ಮಾಡಿಕೊಂಡಿದ್ದರು. ಆರ್‌ಸಿಬಿ ತಂಡವು ಪ್ರಶಸ್ತಿ ಗೆಲ್ಲುತ್ತಿದ್ದಂತೆಯೇ, ಬೆಂಗಳೂರು ನಗರದ ಮೂಲೆ ಮೂಲೆಗಳಲ್ಲಿ ವಿಜಯೋತ್ಸವ ಶುರುವಾಯಿತು. ರಸ್ತೆ ರಸ್ತೆಗಳಲ್ಲಿ ಬೈಕ್‌ ಹಾಗೂ ಕಾರುಗಳ ಜಾಥಾ ಶುರುವಾಯಿತು. ಆ ಕ್ಷಣದಿಂದಲೇ ಪೊಲೀಸರಿಗೆ ಧರ್ಮ ಸಂಕಟ ಶುರುವಾಯಿತು. ಅಭಿಮಾನಿಗಳಿಗೆ ಹೊಡೆದರೆ, ಅದುವೇ ದೊಡ್ಡ ವಿಷಯವಾಗುವ ಸಾಧ್ಯತೆಯಿತ್ತು. ಅಭಿಮಾನಿಗಳ ಮೇಲೆ ಸಾಫ್ಟ್‌ ಕಾರ್ನರ್‌ ಇರಲಿ ಎನ್ನುವ ಸಂದೇಶವು ಪೊಲಿಟಿಕಲ್‌ ಬಾಸ್‌ಗಳಿಂದ ಆಗಲೇ ಬಂದಾಗಿತ್ತು. ಅದಕ್ಕೆ ಪೂರಕವಾಗಿ ಅಂತಹ ಯಾವುದೇ ದೊಡ್ಡ ಅಹಿತಕರ ಘಟನೆಯಾಗದಂತೆ ಬುಧವಾರ ಬೆಳಗಿನ ಜಾವದವರೆಗೂ ಕಣ್ಣಿಗೆ ಎಣ್ಣೆ ಹಾಕಿಕೊಂಡು ನಮ್ಮ ಪೊಲೀಸರು ಕೆಲಸ ಮಾಡಿದ್ದರು. ಬೆಂಗಳೂರು ನಗರದ ಬಹುತೇಕ ಪೊಲೀಸರು ಅಂದು ನಿದ್ರೆಯನ್ನೇ ಮಾಡಿರಲಿಲ್ಲ.

ಈ ಸಂದರ್ಭದಲ್ಲಿ ಏಕಾಏಕಿ ಆರ್‌ಸಿಬಿಯಿಂದ ವಿಜಯೋತ್ಸವದ ಘೋಷಣೆಯಾಯಿತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಕೂಡ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿತು. ಈಗ ವಿಜಯೋತ್ಸವ ಘೋಷಿಸಿದ ಆರ್‌ಸಿಬಿ ಹಾಗೂ ಕೆಎಸ್‌ಸಿಎಯ ಕೆಲ ಸಿಬ್ಬಂದಿಯನ್ನು ಬಂಧಿಸುವಂತೆ ಕಾನೂನು ತಿಳಿದಿರುವ ಮುಖ್ಯಮಂತ್ರಿ ಸೂಚಿಸಿದ್ದಾರೆ. ಒಬ್ಬ ವ್ಯಕ್ತಿಯನ್ನು ಬಂಧಿಸಲು ಸೂಚನೆ ನೀಡುವ ಅಧಿಕಾರ ಯಾವ ಮುಖ್ಯಮಂತ್ರಿಗೆ ಇರುತ್ತದೆ ಎನ್ನುವುದನ್ನು ಕಾನೂನು ಪಂಡಿತರಾದ ಸಿದ್ದರಾಮಯ್ಯರೇ ರಾಜ್ಯದ ಜನತೆಗೆ ವಿವರಿಸಬೇಕು. ಇದನ್ನೇ ತರ್ಕವಾಗಿ ಇರಿಸಿಕೊಂಡಿದ್ದರೆ, ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜಿಸಿದ ಸಿದ್ದರಾಮಯ್ಯ ಹಾಗೂ ಡಿಕೆಶಿ ತಂಡದ ವಿರುದ್ಧ ಎಫ್‌ಐಆರ್‌ ದಾಖಲಿಸಿ, ಬಂಧನ ಮಾಡಬೇಕಾಗುತ್ತದೆಯಲ್ಲವೇ?

ಇದರೊಂದಿಗೆ ಈ ವಿಚಾರದಲ್ಲಿಯೇ ಇಡೀ ಪ್ರಕರಣದ ಸತ್ಯ ಆವರಿಸಿಕೊಂಡಿದೆ. ಸರ್ಕಾರದಲ್ಲಿ ಕುಳಿತಿರುವ ಮೂಲಗಳು ಒಂದು ಸುದ್ದಿ ಹರಡಿಸುತ್ತಿವೆ. ಆ ಪ್ರಕಾರ ಆರ್‌ಸಿಬಿ ಒತ್ತಾಯಕ್ಕೆ ಮಣಿದು ವಿಜಯೋತ್ಸವ ಆಚರಿಸಲಾಯಿತು. ಇದನ್ನು ಒಂದು ಕ್ಷಣಕ್ಕೆ ಒಪ್ಪಿಕೊಳ್ಳೋಣ ಹಾಗೂ ಈ ಆರ್‌ಸಿಬಿ, ಕೆಎಸ್‌ಸಿಎಗೆ ಕಾನೂನು ಗೌರವಿಸುವ ಸಾಮಾನ್ಯ ಜ್ಞಾನವಿಲ್ಲ ಎನ್ನುವುದನ್ನು ನಂಬೋಣ. ಆದರೆ ಈ ನೆಲದ ಕಾನೂನನ್ನು ಪಾಲಿಸುತ್ತೇವೆ ಎಂದು ಇದೇ ವಿಧಾನಸೌಧದ ಮುಂದೆ ಪ್ರಮಾಣ ಮಾಡಿದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಏನಾಗಿತ್ತು? ವಿಧಾನಸೌಧದ ಮುಂದೆ ಕಾರ್ಯಕ್ರಮ ಘೋಷಿಸಿದ್ದು ಪೊಲೀಸ್‌ ಆಯುಕ್ತರೋ ಅಥವಾ ಆರ್‌ಸಿಬಿ ಮಾಲೀಕರೋ? ಆರ್‌ಸಿಬಿ ಹಾಗೂ ಪೊಲೀಸ್‌ ಆಯುಕ್ತರು ತಪ್ಪು ಮಾಡಿದ್ದಾರೆ ಎಂದಾದರೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯ ಪಾತ್ರವೇನು? ಅಲ್ಲಿ ಒಬ್ಬರನ್ನು ಬಂಧಿಸಲು ಸೂಚಿಸಲಾಗಿದೆ, ಇನ್ನೊಬ್ಬರನ್ನು ಅಮಾನತು ಮಾಡಲಾಗಿದೆ. ಆದರೆ ಈ ಸಿಎಂ, ಡಿಸಿಎಂ ಮಾತ್ರ ಬೆಚ್ಚಗೇ ಹೆಣದ ರಾಶಿಯ ಮೇಲೆ ದುರಾಡಳಿತ ಮಾಡುತ್ತಿದ್ದಾರೆ.

ಈಗ ಇನ್ನೊಂದು ಆಡಳಿತಾತ್ಮಕ ವಿಚಾರಕ್ಕೆ ಬರೋಣ. ಒಂದು ನಗರದ ಪೊಲೀಸ್‌ ಆಯುಕ್ತರ ಆದೇಶವನ್ನು ಇಬ್ಬರು ಮಾತ್ರ ಧಿಕ್ಕರಿಸಲು ಅಥವಾ ಬದಲಾಯಿಸಲು ಸಾಧ್ಯವಿದೆ. ಸರ್ಕಾರದಲ್ಲಿ ಅವರ ಮೇಲೆ ಕುಳಿತಿರುವ ಅಧಿಕಾರ ವ್ಯವಸ್ಥೆ ಅಥವಾ ಅಲ್ಲೇ ಪಕ್ಕದಲ್ಲಿರುವ ಹೈಕೋರ್ಟ್‌ ಮಾತ್ರ ಇದನ್ನು ಧಿಕ್ಕರಿಸಿ ಮುಂದೆ ಹೋಗಬಹುದು. ಆದರೆ ಆರ್‌ಸಿಬಿ ಹಾಗೂ ಕೆಎಸ್‌ಸಿಎಗೆ ಅದನ್ನು ತಿರಸ್ಕರಿಸಿರುವ ಧೈರ್ಯ ಇರಲು ಸಾಧ್ಯವೇ ಇಲ್ಲ ಎನ್ನುವುದು ಪೊಲೀಸ್‌ ವ್ಯವಸ್ಥೆ ತಿಳಿದಿರುವ ಯಾವುದೇ ವ್ಯಕ್ತಿ ಹೇಳಬಹುದು. ಇಂತಹ ಅತಿರೇಕಗಳನ್ನು ವ್ಯವಸ್ಥೆಯಲ್ಲಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಮಾಡುವುದಿಲ್ಲ. ಆದರೆ ಪೊಲೀಸ್‌ ಆಯುಕ್ತರ ಸಲಹೆಯನ್ನು ಸೈಲೆಂಟ್‌ ಮಾಡಿಸಬಹುದಾದ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿಗಳಂತ ಬಲಶಾಲಿಗಳು ಹಿಮ್ಮೇಳದಲ್ಲಿ ಇದ್ದಾಗ ಮಾತ್ರ ಇಂತಹ ಅಧಿಕಪ್ರಸಂಗಗಳು ನಡೆಯಲು ಸಾಧ್ಯವಾಗುತ್ತದೆ. ಇದಕ್ಕೆ ಪೂರಕ ಸಾಕ್ಷಿಯೆಂದರೆ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮವಾಗಿದೆ.

ಹೀಗಾಗಿ ಈ ವಿಜಯೋತ್ಸವಕ್ಕೆ ದಯಾನಂದ್‌ ಅನುಮತಿ ನೀಡಿರಲು ಸಾಧ್ಯವೇ ಇಲ್ಲ. ವಿಧಾನಸೌಧದ ಮೂರನೇ ಮಹಡಿಯಿಂದ ಬಂದಿರುವ ಮೌಖಿಕ ಸೂಚನೆಯಿಂದಲೇ ಇಂತಹ ದೊಡ್ಡ ತೀರ್ಮಾನಗಳು ಆಗಲು ಸಾಧ್ಯವಾಗುತ್ತದೆ. ಇದಲ್ಲದೇ ಈ ತೀರ್ಮಾನಕ್ಕೂ ಮುನ್ನ ಮಾನ್ಯ ಗೃಹ ಸಚಿವರು ಹಾಗೂ ಆಯುಕ್ತರು ಭೇಟಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ದಯಾನಂದ್‌ ಅವರ ಇತಿಹಾಸ ಗೊತ್ತಿರುವರಿಗೆ ಈ ಸತ್ಯವೂ ತಿಳಿದಿರುತ್ತದೆ. ದಯಾನಂದ್‌ ಅವರನ್ನು ಪಕ್ಕಕ್ಕಿರಿಸಿ ನೋಡಿದಾಗಲೂ ಒಬ್ಬ ಟ್ರೇನಿ ಪೊಲೀಸ್‌ ಅಧಿಕಾರಿ ಕೂಡ ಇಂತಹ ಬ್ಲಂಡರ್‌ನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಏಕೆಂದರೆ ರಾತ್ರಿಯಿಡಿ ಪೊಲೀಸರು ಬಳಲಿದ್ದಾರೆ ಹಾಗೂ ಹುಚ್ಚು ಕ್ರೇಜ್‌ನಲ್ಲಿರುವ ಅಭಿಮಾನಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೇರುತ್ತಾರೆ ಎನ್ನುವುದು ಪೊಲೀಸರಿಗೆ ತಿಳಿದಿರುತ್ತದೆ. ಆದರೆ ಇಲ್ಲಿ ಪೊಲೀಸರಿಗೆ ಪ್ಲ್ಯಾನ್‌ ಮಾಡಲು, ಸಿದ್ಧತೆ ಮಾಡಿಕೊಳ್ಳಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅಥವಾ ಗೃಹ ಸಚಿವರು ಅವಕಾಶವನ್ನೇ ನೀಡಿಲ್ಲ. ಮಧ್ಯಾಹ್ನ ಒಂದು ಗಂಟೆಗೆ ಮನೆಗೆ ಐವತ್ತು ಜನ ಅತಿಥಿಗಳನ್ನು ಆಹ್ವಾನಿಸಿ, ಊಟ ಸರಿಯಾಗಲಿಲ್ಲವೆಂದು ಮನೆಯ ಹೆಂಗಸರ ವಿರುದ್ಧ ಯಜಮಾನ ಕೂಗಾಡಿದಂತೆ ಈ ರಾಜ್ಯದ ಸಿಎಂ, ಡಿಸಿಎಂ ವರ್ತನೆಯಿದೆ.

ಈ ಹಂತದಲ್ಲಿ ಈ ಪ್ರಚಾರ ಪ್ರಿಯ ಸಿಎಂ-ಡಿಸಿಎ ಪಟಾಲಂನ ಇನ್ನೊಂದು ಹುಚ್ಚು ಪ್ರಮಾದವನ್ನು ನಾವು ಮರೆಯಕೂಡದು. ರಾಜ್ಯದ ನೆಲ, ಭಾಷೆಗೆ ಸಂಬಂಧವಿಲ್ಲದ ಒಂದು ಖಾಸಗಿ ಫ್ರಾಂಚೈಸಿಗೆ ಧನ್ಯವಾದ ಹೇಳಲು ಸರ್ಕಾರಿ ಕಾರ್ಯಕ್ರಮ ಆಯೋಜಿಸಿದ್ದರಿಂದ ಆದ ಸಮಸ್ಯೆಯನ್ನು ನಿರ್ಲಕ್ಷಿಸಬಾರದು. ಪಕ್ಕದ ಜಿಲ್ಲೆಗಳಿಂದ ಪೊಲೀಸರನ್ನು ಕರೆಯಿಸಿಕೊಳ್ಳಲು ಅಥವಾ ಅರೆ ಸೇನಾ ಪಡೆಗಳನ್ನು ನಿಯೋಜಿಸಲು ಅವಕಾಶವನ್ನೇ ಕೊಡದೇ ಪ್ರಚಾರ ಪ್ರಿಯ ಪಟಾಲಂ ಸರ್ಕಾರಿ ಕಾರ್ಯಕ್ರಮ ಘೋಷಿಸಿತು. ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿಯೆಂದು ಸಿಎಂ ಆದಿಯಾಗಿ ಎಲ್ಲರೂ ಆಹ್ವಾನ ನೀಡಿದರು. ಈ ಆಹ್ವಾನ ನೀಡಿದ ಸಮಯದಿಂದ ವೇದಿಕೆ ಕಾರ್ಯಕ್ರಮದ ನಡುವೆ ಸರಿಯಾಗಿ ಪಂಚೆ ಉಟ್ಟುಕೊಳ್ಳಲು ಕೂಡ ಸಿದ್ದರಾಮಯ್ಯರಿಗೆ ಸಮಯ ಸಾಕಾಯಿತೋ, ಇಲ್ಲವೋ ಗೊತ್ತಿಲ್ಲ. ಆದರೆ ಆ ಸಮಯದಲ್ಲಿ ಪೊಲೀಸರು ಎಲ್ಲವನ್ನೂ ನಿಯೋಜಿಸಬೇಕು ಎನ್ನುವುದು ಅತ್ಯಂತ ಹೇಸಿಗೆಯ ವಿಚಾರ.

ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವು ವಿಧಾನಸೌಧಕ್ಕೆ ವಿಸ್ತಾರಗೊಂಡಾಗಲೇ ಅಪಾಯ ಮೈಮೇಲೆ ಬಂದಾಗಿತ್ತು. ಒಬ್ಬ ಪೊಲೀಸ್‌ ಆಯುಕ್ತರಾಗಿ ಮುಖ್ಯಮಂತ್ರಿ ಹಾಗೂ ಶಕ್ತಿಸೌಧಕ್ಕೆ ಭದ್ರತೆ ನೀಡುವುದು ಅನಿವಾರ್ಯವಾಗುತ್ತದೆ. ಏಕೆಂದರೆ ಸಾಮಾನ್ಯವಾಗಿ ಅವರು ಮೊದಲು ಆಡಳಿತ ನಡೆಸುವರಿಗೆ ಉತ್ತರ ಕೊಡಬೇಕಾಗುತ್ತದೆ. ಮೊದಲೇ ಪೊಲೀಸರ ಕೊರತೆ ಅನುಭವಿಸುತ್ತಿದ್ದವರಿಗೆ ಒಂದೇ ಸಮಯದಲ್ಲಿ ಎರಡು ದೊಡ್ಡ ದೊಡ್ಡ ಕಾರ್ಯಕ್ರಮವನ್ನು ಕೇವಲ ನಾಲ್ಕು ಗಂಟೆಯಲ್ಲಿ ನಿಭಾಯಿಸಲು ಸಾಧ್ಯವೇ ಇಲ್ಲ. ದೇವರೇ ಕೆಳಗಿಳಿದು ಬಂದಿದ್ದರೂ ಆಗುತ್ತಿರಲಿಲ್ಲ. ಪ್ರಚಾರದ ತೆವಲಿಗೆ ಬಿದ್ದು ಈ ಕಾರ್ಯಕ್ರಮ ಆಯೋಜಿಸಿದವರನ್ನು ಸಂಪುಟದಿಂದ ಕಿತ್ತೆಸೆಯುವ ಬದಲಿಗೆ, ಬಡಪಾಯಿ ಕನ್ನಡಿಗ ಅಧಿಕಾರಿಯನ್ನು ಮನೆಗೆ ಕಳುಹಿಸಲಾಗಿದೆ.

ಒಂದೇ ಅವಧಿಯಲ್ಲಿ ಎರಡು ಕಡೆ ಕಾರ್ಯಕ್ರಮ ಆಯೋಜನೆ ಆಗಿರದಿದ್ದರೆ, ಪೊಲೀಸರ ನಿಗಾವು ಚಿನ್ನಸ್ವಾಮಿ ಮೈದಾನದ ಮೇಲೆಯೇ ಇರುತ್ತಿತ್ತು. ಆಗ ಪರಿಸ್ಥಿತಿಯನ್ನು ಪೊಲೀಸರು ನಿಭಾಯಿಸುವ ಸಾಧ್ಯತೆ ಹೆಚ್ಚಿರುತ್ತಿತ್ತು. ಆದರೆ ಎಲ್ಲ ಅರಾಜಕತೆಯನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಮಾಡಿ ಈ ಕನ್ನಡಿಗ ಪೊಲೀಸ್‌ ಆಯುಕ್ತರನ್ನು ಅಮಾನತು ಮಾಡುವಂಥ ದರ್ಪವನ್ನು ಉತ್ತರ ಕೊರಿಯಾದಲ್ಲಿ ಮಾತ್ರ ನಿರೀಕ್ಷಿಸಬಹುದಾಗಿತ್ತು. ಆದರೆ ಇವರೇಕೋ ಆ ಕಟುಕನನ್ನು ಮೀರಿಸುವ ಹಂತಕ್ಕೆ ಹೋಗಿದ್ದಾರೆ.

ಇವರ ಕಟುಕತನ ಇಲ್ಲಿಗೆ ನಿಂತಿಲ್ಲ. ಚಿನ್ನಸ್ವಾಮಿ ಮೈದಾನಕ್ಕೆ ಹೋಗಲು ಆಟಗಾರರಿಗೆ ಕಷ್ಟವಾಗುತ್ತಿತ್ತು ಎಂದು ತಮ್ಮ ಕಾರಿನಲ್ಲೇ ಬಿಡಲು ಹೋಗಿದ್ದ ಉಪಮುಖ್ಯಮಂತ್ರಿಗಳು, ಮೈದಾನದೊಳಕ್ಕೆ ಹೋಗಿ ಟ್ರೋಫಿಯನ್ನು ಕಿತ್ತುಕೊಂಡು ಮುತ್ತಿಟ್ಟು ಬಂದಿದ್ದಾರೆ. ಹೊರಗಡೆ ಹೆಣದ ಮುಂದೆ ಪಾಲಕರು ಅಳುತ್ತಿರುವಾಗ, ಒಳಗಡೆ ಸಂಭ್ರಮಿಸಲು ಹೇಗೆ ಸಾಧ್ಯವಾಯಿತು ಎನ್ನುವುದನ್ನು ಈ ವ್ಯಕ್ತಿ ವಿವರಿಸಬೇಕಿದೆ. ಇಂದು ಮಾಧ್ಯಮದ ಮುಂದೆ ಬಂದು ಕಣ್ಣೀರು ಹಾಕುವ ಮೊದಲು, ಈ ವರ್ತನೆಯನ್ನು ವಿವರಿಸಬೇಕಿದೆ. ಬುಡದಿಂದ, ತುದಿಯವರೆಗೆ ಬೇಜವಾಬ್ದಾರಿ, ದುರಹಂಕಾರದ ಜತೆಗೆ ಸೂಕ್ಷ್ಮತೆಯಿಲ್ಲದೇ ವರ್ತಿಸಿದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಅದೇ ಕುರ್ಚಿಯಲ್ಲಿ ಕುಳಿತು ಓರ್ವ ಕನ್ನಡಿಗ ದಕ್ಷ ಅಧಿಕಾರಿಗೆ ಕಪ್ಪುಚುಕ್ಕೆ ತರುವುದನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ?

ಮಾನ್ಯ ಡಿ.ಕೆ ಶಿವಕುಮಾರ್‌ ಅವರಿಂದ ಇಂತಹ ವರ್ತನೆ ಹೊಸದೇನಲ್ಲ. ಯಾವುದನ್ನಾದರೂ ಸಮರ್ಥಿಸಿ, ಮೈಕೊಡವಿಕೊಂಡು ಹೋಗುವ ಶಕ್ತಿಯನ್ನು ಅವರು ಗಳಿಸಿಕೊಂಡಿದ್ದಾರೆ. ಅವರಿಂದ ಅತಿಯಾದ ನಿರೀಕ್ಷೆಯನ್ನು ಹೊಂದುವುದು ತಪ್ಪಾಗುತ್ತದೆ. ಆದರೆ ಸೈದ್ಧಾಂತಿಕವಾಗಿ ಯಾವುದೇ ವಿರೋಧವಿದ್ದರೂ ಸಿದ್ದರಾಮಯ್ಯನವರ ಮಾನವೀಯ ನೆಲಗಟ್ಟುಗಳ ನಗ್ಗೆ ನನಗೊಂದಿಷ್ಟು ಅಭಿಮಾನವಿತ್ತು. ಆದರೆ ಸಿದ್ದರಾಮಯ್ಯ ಕೂಡ ಈ ರಾಜ್ಯದ ಇನ್ನಿತರ ಕೆಲ ನಾಯಕರಂತೆ ವರ್ತಿಸುತ್ತಿರುವುದು ಬೇಸರ ತರಿಸುತ್ತಿದೆ. ಜನಸಾಮಾನ್ಯರ ಮಧ್ಯೆ ಬೆಳೆದುಬಂದ ಓರ್ವ ಜನನಾಯಕರಿಂದ ಇದನ್ನು ನಿರ್ಲಕ್ಷಿಸರಲಿಲ್ಲ.

ಪೊಲೀಸರು ಮನುಷ್ಯರಲ್ಲವೇ?

ಅದೆಷ್ಟೋ ರಾಜಕಾರಣಿಗಳು ರಾತ್ರಿಯಿಡಿ ಸುಖದ ನಿದ್ರೆ ಮಾಡಿಯೂ ವೇದಿಕೆಯ ಮೇಲೆ ಗೊರಕೆ ಹೊಡೆಯುತ್ತಾರೆ. ಆದರೆ ರಾತ್ರಿಯಿಡಿ ಕೆಲಸ ಮಾಡಿದ ಪೊಲೀಸರು ಮರುದಿನ ಮತ್ತದೇ ರಸ್ತೆಯಲ್ಲಿ ನಿಂತು ಕೆಲಸ ಮಾಡಬೇಕೆಂದು ಈ ದುರಹಂಕಾರಿಗಳು ಅಪೇಕ್ಷಿಸುತ್ತಾರೆ. ಅವರು ಕೂಡ ಮನುಷ್ಯರು ಎನ್ನುವ ಸಾಮಾನ್ಯ ವಿಚಾರವನ್ನು ಅರಿಯದವರೆಲ್ಲ ಆಡಳಿತ ಚುಕ್ಕಾಣಿ ಹಿಡಿದರೆ ಹೇಗೆ? ಪೊಲೀಸರನ್ನು ನಾವೆಲ್ಲ ಅದೆಷ್ಟೋ ಬಾರಿ ಟೀಕಿಸಿರಬಹುದು. ಆದರೆ ಇದು ಮಾತ್ರ ಅತ್ಯಂತ ಅಮಾನವೀಯ. ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸವಿದು. ಚಿನ್ನಸ್ವಾಮಿ ಸುತ್ತಮುತ್ತ ಅದೆಷ್ಟೋ ಪೊಲೀಸರು ಜರನ್ನು ರಕ್ಷಿಸಲು ಮಾಡುತ್ತಿದ್ದ ಹರಸಾಹಸ ನೋಡಿದಾಗ ನಿಂತಲ್ಲಿಯೇ ನಾನು ಕುಸಿದುಹೋಗಿದ್ದೆ. ಕೆಲವು ಪೊಲೀಸರು ಕೈನಲ್ಲಿ ದೇಹ ಹಿಡಿದುಕೊಂಡು ಕಣ್ಣೀರು ಹಾಕುತ್ತಿದ್ದರು. ಆದರೆ ಹೈಕೋರ್ಟ್‌ನಲ್ಲಿ ಬರುವ ಪಿಐಎಲ್‌ ವಿಚಾರಣೆಯಲ್ಲಿ ಆಗಬಹುದಾದ ಮುಖಭಂಗ ತಪ್ಪಿಸಿಕೊಳ್ಳಲು ಸಿಎಂ ಹಾಗೂ ಡಿಸಿಎಂ ಮಾಡಿರುವ ನಾಟಕ ಪ್ರದರ್ಶನವಿದು. ಇವರಿಬ್ಬರು ಮಾಡಿದ ತಪ್ಪಿಗೆ ಹೈಕೋರ್ಟ್‌ ಮುಂದೆ ಇವರನ್ನು ಬಲಿ ಹಾಕಲಾಗಿದೆ. ಇವರ ಪ್ರಚಾರಕ್ಕಾಗಿ ಹನ್ನೊಂದು ಜೀವ ಕಳೆದರು. ಅಲ್ಲಿ ಮಖ ಉಳಿಸಿಕೊಳ್ಳಲು ಅಧಿಕಾರಿಗಳನ್ನು ಬಲಿ ಹಾಕಿದರು. ಈ ದುರಹಂಕಾರಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳಲು ಯಾವುದೇ ನಾಟಕ ಮಾಡಲು ಸಿದ್ಧವಿರುತ್ತಾರೆ. ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯು ಇದಕ್ಕಿಂತ ಹೊಲಸನ್ನು ನೋಡಲು ಸಾಧ್ಯವಿಲ್ಲ. ಆದಾಗ್ಯೂ ಈ ಸರ್ಕಾರ ನೀಡಿದ ನಾಲ್ಕು ಗಂಟೆ ಅವಧಿಯಲ್ಲಿ ಪೊಲೀಸರು ಮಾಡಿದ ಕೆಲಸನ್ನು ನಾನು ಖಂಡಿತ ಶ್ಲಾಘಿಸುತ್ತೇನೆ ಹಾಗೂ ಅವರೊಂದಿಗೆ ಪ್ರತಿಯೊಬ್ಬರೂ ನಿಲ್ಲಬೇಕು ಎನ್ನುವ ಮನವಿ ಮಾಡುತ್ತೇನೆ. ಈ ಕ್ಷಣಕ್ಕೂ ಬಲಿಯಾದ ಜೀವ ಹನ್ನೊಂದಕ್ಕೆ ನಿಂತಿದ್ದರೆ ದಯಾನಂದ್‌ ಹಾಗೂ ಅವರ ತಂಡವೇ ಅದಕ್ಕೆ ಕಾರಣವಾಗಿದೆ. ಏಕೆಂದರೆ ಜವಾಬ್ದಾರಿಯುತ ಸೂತ್ರದಾರರಂತೆ ಅವರು ದುರ್ಘಟನೆ ಬಳಿಕ ಮೈದಾನಕ್ಕೆ ಹೋಗಿ ಟ್ರೋಫಿಗೆ ಮುತ್ತುಕೊಡುತ್ತಿರಲಿಲ್ಲ.

ಕೊನೆಯದಾಗಿ: ಕನ್ನಡಿಗ ಸಮರ್ಥ ಆಟಗಾರರಿಗೆ ಮಣೆ ಹಾಕದ ತಂಡದ ಗೆಲುವಿನಲ್ಲಿ ಕನ್ನಡ ಅಸ್ಮಿತೆಯನ್ನು ಸೇರಿಸಿ ರಾಜಕೀಯ ಮಾಡಲು ಹೋದ ಸರ್ಕಾರವು ಹೆಣದ ರಾಶಿಯನ್ನು ಹಾಕಿತು. ಈ ಪ್ರಚಾರದ ನಾಟಕದಲ್ಲಿ ನಮ್ಮದೇ ಓರ್ವ ದಕ್ಷ ಕನ್ನಡಿಗ ಅಧಿಕಾರಿಯನ್ನು ನಮ್ಮ ಸರ್ಕಾರ ಮನೆಗೆ ಕಳುಹಿಸಿತು. ಅಲ್ಲಿಗೆ ಕನ್ನಡ ಹಾಗೂ ಕರುನಾಡು ಉದ್ಧಾರವಾಯಿತು. ಉದಯವಾಯಿತು ಚೆಲುವ ಕನ್ನಡ ನಾಡು.

(ಲೇಖನದಲ್ಲಿರುವ ಅಂಶಗಳು ಲೇಖಕರ ಅಭಿಪ್ರಾಯಗಳೇ ಹೊರತು, ಹಿಂದೂಸ್ತಾನ್ ಟೈಮ್ಸ್ ಕನ್ನಡ ತಾಣದ್ದಲ್ಲ)

ಉಮೇಶ್ ಕುಮಾರ್ ಶಿಮ್ಲಡ್ಕ: ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!