ಆರ್ಸಿಬಿ ಮಾಜಿ ಆಟಗಾರ ಮಿಂಚು, ಮುಂಬೈಗೆ ಮತ್ತೊಂದು ಭರ್ಜರಿ ಜಯ; ದಾಖಲೆಯ ಚೇಸ್ ಮಾಡಿದ್ದ ಎಸ್ಆರ್ಹೆಚ್ಗೆ ಏನಾಯ್ತು?

ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಜರುಗಿದ 18ನೇ ಆವೃತ್ತಿಯ ಐಪಿಎಲ್ನ 33ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್, 4 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಮುಂಬೈ ಇಂಡಿಯನ್ಸ್ಗೆ ಮತ್ತೊಂದು ಭರ್ಜರಿ ಜಯ; ದಾಖಲೆಯ ಚೇಸ್ ಮಾಡಿದ್ದ ಎಸ್ಆರ್ಹೆಚ್ಗೆ ಏನಾಯ್ತು? (AFP)
2025ರ ಇಂಡಿಯನ್ ಪ್ರೀಮಿಯರ್ ಲೀಗ್ನ 33ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಂಘಟಿತ ಹೋರಾಟ ನೀಡಿದ ಮುಂಬೈ ಇಂಡಿಯನ್ಸ್ ಸತತ 2ನೇ ಗೆಲುವು ದಾಖಲಿಸಿದೆ. ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ದಾಖಲೆ ರನ್ ಚೇಸ್ ಮಾಡಿದ್ದ ಸನ್ರೈಸರ್ಸ್ ಹೈದರಾಬಾದ್ 5ನೇ ಸೋಲಿಗೆ ಶರಣಾಗಿದ್ದು, ಅಂಕಪಟ್ಟಿಯಲ್ಲಿ9 ಸ್ಥಾನದಲ್ಲಿದೆ. ಮತ್ತೊಂದೆಡೆ ಮೂರನೇ ಜಯದ ನಗೆ ಬೀರಿದ ಎಂಐ, 7ನೇ ಸ್ಥಾನದಲ್ಲಿದೆ.
ಮುಂಬೈನ ಐಕಾನಿಕ್ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್, ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು. ಅಭಿಷೇಕ್ ಶರ್ಮಾ 40 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್. ಈ ಗುರಿ ಬೆನ್ನಟ್ಟಿದ ಮುಂಬೈ, 18.1 ಓವರ್ಗಳಲ್ಲಿ 4 ವಿಕೆಟ್ಗೆ ಜಯದ ನಗೆ ಬೀರಿತು. ಇದು ಮುಂಬೈನ ಸತತ 2ನೇ ಗೆಲುವು. ಬೌಲಿಂಗ್ನಲ್ಲಿ ಪ್ರಮುಖ 2 ವಿಕೆಟ್ ಉರುಳಿಸಿದ ವಿಲ್ ಜಾಕ್ಸ್ ಬ್ಯಾಟಿಂಗ್ನಲ್ಲಿ 36 ರನ್ ಗಳಿಸಿ ಪ್ರಮುಖ ಪಾತ್ರವಹಿಸಿದರು.
ಆರ್ಸಿಬಿ ಮಾಜಿ ಆಟಗಾರ ಅಬ್ಬರ
ಕಳೆದ ಸೀಸನ್ನಲ್ಲಿ ಆರ್ಸಿಬಿ ಪರ ಆಡಿದ್ದ ವಿಲ್ ಜಾಕ್ಸ್ ಕೊನೆಗೂ ಮಿಂಚುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಪಂದ್ಯಗಳಲ್ಲಿ ಅವಕಾಶ ಸಿಕ್ಕರೂ ವೈಫಲ್ಯ ಅನುಭವಿಸಿದ್ದ ಆರ್ಸಿಬಿ ಮಾಜಿ ಆಟಗಾರ ಇದೀಗ ಎಸ್ಆರ್ಹೆಚ್ ವಿರುದ್ಧ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಧಮಾಕ ಸೃಷ್ಟಿಸಿದ್ದಾರೆ. 3 ಓವರ್ ಬೌಲಿಂಗ್ ಮಾಡಿದ ವಿಲ್ ಜಾಕ್ಸ್, ಕೇವಲ 14 ರನ್ ಬಿಟ್ಟುಕೊಟ್ಟು ಟ್ರಾವಿಸ್ ಹೆಡ್ ಮತ್ತು ಇಶಾನ್ ಕಿಶನ್ರನ್ನು ಔಟ್ ಮಾಡಿದ್ದಾರೆ. ಬ್ಯಾಟ್ನಲ್ಲಿ 26 ಎಸೆತಗಳನ್ನು ಎದುರಿಸಿ 3 ಬೌಂಡರಿ, 2 ಸಿಕ್ಸರ್ ಸಹಿತ 36 ರನ್ ಗಳಿಸಿ ಪ್ರಮುಖ ಪಾತ್ರವಹಿಸಿದರು.
ಎಸ್ಆರ್ಹೆಚ್ಗೆ ಏನಾಯ್ತು?
ತನ್ನ ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 246 ರನ್ಗಳ ದಾಖಲೆಯ ಚೇಸ್ ಮಾಡಿದ್ದ ಸನ್ರೈಸರ್ಸ್ ಹೈದರಾಬಾದ್ ಬ್ಯಾಟರ್ಸ್ ಈ ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡಿದ್ದು ಅಚ್ಚರಿ ಮೂಡಿಸಿತು. ಅಭಿಷೇಕ್ ಶರ್ಮಾ (40), ಟ್ರಾವಿಸ್ ಹೆಡ್ (28), ಹೆನ್ರಿಚ್ ಕ್ಲಾಸೆನ್ (37) ದೊಡ್ಡ ಸ್ಕೋರ್ಗೆ ಯತ್ನಿಸಿದರಾದರೂ ಮುಂಬೈ ಬೌಲರ್ಗಳ ಹೊಡಿಬಡಿ ಆಟವಾಡಲು ಸಾಧ್ಯವಾಗಲಿಲ್ಲ. ಎಂಐ ಬೌಲರ್ಗಳ ನಿಧಾನಗತಿಯ ಮತ್ತು ತಿರುವು ಪಡೆದ ಚೆಂಡನ್ನು ಬೌಂಡರಿ ಗೆರೆ ದಾಟಿಸಲು ಹರಸಾಹಸ ಪಟ್ಟರು. ಹಲವು ಜೀವದಾನ ಪಡೆದಿದ್ದರ ಹೊರತಾಗಿಯೂ ಯಾರೂ 50ರ ಗಡಿ ದಾಟಿಲ್ಲ.