ಮನೆಯವರನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿ ಶ್ರಾವಣಿ; ಸುಬ್ಬು ಮದುವೆ ಸತ್ಯ ತಿಳಿಯಲು ಬಂದ ಶ್ರೀವಲ್ಲಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಸುಬ್ಬುಗೆ ಶ್ರಾವಣಿ ಮೇಲೆ ಪ್ರೀತಿಯಿಲ್ಲ ಎನ್ನುವ ಶ್ರೀವಲ್ಲಿ
ಸುಬ್ಬು ಕೆಲಸಕ್ಕೆಂದು ಹೊರಟಾಗ ಅವನ ಹಿಂದೆಯೇ ಬರುವ ಶ್ರಾವಣಿ ಅವನಿಗೆ ಡಬ್ಬಿ ಕೊಡಬೇಕು ಎನ್ನುವ ಆಸೆ ಹೊಂದಿರುತ್ತಾಳೆ. ಅಷ್ಟೊತ್ತಿಗೆ ಅಲ್ಲಿಗೆ ಬರುವ ಶ್ರೀವಲ್ಲಿ ಸುಬ್ಬು ಬಳಿ ‘ಸುಬ್ಬು ನಾನು ನಿನ್ನ ಜೊತೆ ಮಾತನಾಡಬೇಕು, ನಿನಗೆ ಶ್ರಾವಣಿ ಮೇಲೆ ನಿಜಕ್ಕೂ ಪ್ರೀತಿ ಇದ್ಯಾ, ನೀವು ಅವಳನ್ನು ಪ್ರೀತಿಸಿ ಮದುವೆ ಆಗಿದ್ದಾ, ಹಾಗಿದ್ದ ಮೇಲೆ ನನ್ನ ಜೊತೆ ಮದುವೆಯಾಗಲು ಯಾಕೆ ಒಪ್ಪಿಕೊಂಡೆ‘ ಎಂದೆಲ್ಲಾ ಪ್ರಶ್ನೆ ಕೇಳುತ್ತಾಳೆ. ಅಲ್ಲದೇ ತಾನು ಇಂದು ಉತ್ತರ ತಿಳಿದುಕೊಳ್ಳದೇ ಇಲ್ಲಿಂದ ಹೋಗುವುದಿಲ್ಲ ಎಂದು ಹಟ ಹಿಡಿಯುತ್ತಾಳೆ. ಅವಳ ಮಾತು ಕೇಳಿ ಕೋಪ ಮಾಡಿಕೊಳ್ಳುವ ಶ್ರಾವಣಿ ‘ಶ್ರೀವಲ್ಲಿ ನೀನು ಏನೇನೋ ಮಾತನಾಡಬೇಡ, ಪ್ರೀತಿಯಿಲ್ಲದೇ ಸುಬ್ಬು ನನ್ನ ಕುತ್ತಿಗೆಗೆ ತಾಳಿ ಕಟ್ಟಿಲ್ಲ. ಮದುವೆಯಾದ ಹುಡುಗನ ಮುಂದೆ ಆಡುವ ಮಾತಲ್ಲ ಇದು‘ ಎಂದು ಅವಳಿಗೆ ಜೋರು ಮಾಡುತ್ತಾಳೆ. ಮಾತಿಗೆ ಮಾತು ಬೆಳೆದಾಗ ಕೋಪಗೊಳ್ಳುವ ಸುಬ್ಬು ಇಬ್ಬರಿಗೂ ಸುಮ್ಮನೆ ಇರಿ ಎಂದು ಗದರುತ್ತಾನೆ. ಅಲ್ಲದೇ ಕೋಪಗೊಂಡು ಬೈಕ್ ಹತ್ತಿ ಹೊರಟು ಬಿಡುತ್ತಾನೆ. ಮನೆಗೆ ಹೋಗುವಾಗ ಶ್ರೀವಲ್ಲಿ ಶ್ರಾವಣಿಗೆ ‘ಸುಬ್ಬುಗೆ ನಿನ್ನ ಮೇಲೆ ಪ್ರೀತಿ ಇಲ್ಲ ಎಂದರೆ ನಾನು ಅವನನ್ನು ಪಡೆದುಕೊಂಡೇ ತೀರುತ್ತೇನೆ‘ ಎಂದು ಸವಾಲು ಹಾಕುತ್ತಾಳೆ. ಶ್ರಾವಣಿ ಕೂಡ ‘ಸುಬ್ಬು ನನ್ನವನು, ಅವನಿಗೆ ನನ್ನ ಮೇಲೆ ಪ್ರೀತಿ ಇದೆ ಎಂಬುದನ್ನು ನಾನು ಜಗತ್ತಿಗೆ ತೋರಿಸುತ್ತೇನೆ‘ ಎಂದು ಮನದಲ್ಲೇ ಸವಾಲು ಹಾಕುತ್ತಾಳೆ.